

ಗಂಗಾವತಿ: ಇಲ್ಲಿನ ನಗರಸಭೆಯ 2025-26ನೇ ಸಾಲಿನ ಆದಾಯ 41.05 ಕೋ.ರೂ. ನಿರೀಕ್ಷಿಸಲಾಗಿದ್ದು, ಆಡಳಿತ ಪಕ್ಷ ಬಿಜೆಪಿಯಿಂದ ಒಟ್ಟು 3.72ಲಕ್ಷ ರೂ. ಉಳಿತಾಯ ಬಜೆಟ್ ಶುಕ್ರವಾರ ಮಂಡಿಸಿತು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಜೆಟ್ ಮಂಡನೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಬಜೆಟ್ ಮಂಡಿಸಿದರು. ಎಸ್‌ಎ್ಸಿ ಅನುದಾನ 8.10 ಕೋಟಿ ರೂ. ವಿದ್ಯುತ್ ಅನುದಾನ 7.04 ಕೋಟಿ ರೂ., ವೇತನ ಅನುದಾನ 5.54 ಕೋಟಿ ರೂ., ಆಸ್ತಿ ತೆರಿಗೆಗಳಿಂದ 8.07 ಕೋ.ರೂ., 15ನೇ ಹಣಕಾಸು ಆಯೋಗದಿಂದ 5.48 ಕೋ.ರೂ., ಮಳಿಗೆ ಬಾಡಿಗೆ, ನೀರಿನ ಶುಲ್ಕ ಎಸ್‌ಬಿಎಂ 2.0 ಅನುದಾನ ಮತ್ತು ಉದ್ದಿಮೆ ಪರವಾನಗಿಗಳಿಂದ 4.38 ಕೋ.ರೂ.ಗಳನ್ನು ನಿರೀಕ್ಷಿಸಲಾಗಿದೆ.
ರಸ್ತೆ, ಚರಂಡಿ, ನೀರು ಪೂರೈಕೆ, ಪಾರ್ಕ್, ವಿದ್ಯುತ್ ದೀಪಗಳ ಅಭಿವೃದ್ಧಿಗಾಗಿ 3.23 ಕೋಟಿ ರೂ., ಸಿಬ್ಬಂದಿ ವೇತನಕ್ಕಾಗಿ 7.84 ಕೋಟಿ ರೂ., ಮೀಸಲು ವರ್ಗದ ನಿಧಿಗಾಗಿ 78.23 ಲಕ್ಷ ರೂ., ವಿದ್ಯುತ್ ದೀಪ ನೀರು ಪೂರೈಕೆ, ಶೌಚಗೃಹ, ನೈರ್ಮಲ್ಯ ಮತ್ತು ಒಳಚರಂಡಿ ನಿರ್ವಹಣೆಗಾಗಿ 6.24 ಕೋಟಿ ರೂ., ಘನತ್ಯಾಜ್ಯ ವಿಲೇವಾರಿಗೆ 3.85 ಕೋ.ರೂ. ಮೀಸಲಿಡಲಾಗಿದೆ. ಉಳಿತಾಯ ಆಯವ್ಯಯವನ್ನು ಆಡಳಿತ ಮತ್ತು ವಿಪಕ್ಷ ಒಮ್ಮತದಿಂದ ಸ್ವಾಗತಿಸಿದ್ದು, ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸಿಬ್ಬಂದಿ ಗಮನಹರಿಸುವಂತೆ ಸದಸ್ಯರು ಸಲಹೆ ನೀಡಿದರು.