

ಗಂಗಾವತಿ: ನಗರದ ಎಲ್ಲ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಕ್ರೋಡೀಕರಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಮೊದಲ ಹಂತದಲ್ಲಿ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಹೇಳಿದರು.
ನಗರದಲ್ಲಿನ ರಸ್ತೆ ಅವ್ಯವಸ್ಥೆ ಕುರಿತು ನಗರಸಭೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದರು. ನಗರೋತ್ಥಾನ ಯೋಜನೆ ಅನುದಾನ ಬಳಕೆಗೆ ತಾಂತ್ರಿಕ ತೊಂದರೆಗಳಿದ್ದು, ಅಧಿಕಾರಿಗಳು ಪರಿಹರಿಸಲಿದ್ದಾರೆ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ವಿವಿಧ ಯೋಜನೆ ಅನುದಾನ ಬಳಸಿಕೊಳ್ಳುವಂತೆ ಸೂಚಿಸಿದ್ದು, ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದರು.
ಸಿಬಿಎಸ್ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆ ಮತ್ತು ಬೀದಿ ದೀಪಗಳ ಕಾಮಗಾರಿಗೆ 7 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಶುರುವಾಗಿದೆ. ಮಳೆಗಾಲ ಹಿನ್ನೆಲೆಯಲ್ಲಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ನಗರಸಭೆ ನಿಧಿಯಿಂದ 15 ಲಕ್ಷ ರೂ. ಮತ್ತು ಸಂಸದರ ನಿಧಿಯಿಂದ 15 ಲಕ್ಷ ರೂ. 30 ಲಕ್ಷ ರೂ.ಗಳನ್ನು ಮೀಸಲಿಡಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಅವೈಜ್ಞಾನಿಕ ರೀತಿಯ ಕಾಮಗಾರಿ ಸಹಿಸಲ್ಲ. ರಸ್ತೆ ಅಭಿವೃದ್ಧಿಯಾಗುವರಿಗೂ ಗುಂಡಿಗಳನ್ನು ಶಾಶ್ವತ ಮುಚ್ಚುವ ವ್ಯವಸ್ಥೆಯಾಗಬೇಕಿದ್ದು, ತಾಂತ್ರಿಕತೆ ಅನುಗುಣ ಕಾಮಗಾರಿ ನಿರ್ವಹಿಸಲು ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ ಎಂದರು.
ರಸ್ತೆ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ನಗರದ ಆನೆಗೊಂದಿ ರಸ್ತೆಯಲ್ಲಿ ಹಾಳಾಗಿರುವ ರಸ್ತೆ ದುಸ್ಥಿತಿಯನ್ನು ವೀಕ್ಷಿಸಿದರು. ತುರ್ತಾಗಿ ಕೈಗೊಳ್ಳಬೇಕಿರುವ ಕಾಮಗಾರಿಯ ಬಗ್ಗೆ ಇಂಜಿನಿಯರ್‌ಗಳಿಗೆ ಮಾಹಿತಿ ನೀಡಿದರಲ್ಲದೇ, ಗುಣಮಟ್ಟದ ವಿಚಾರದಲ್ಲಿ ನಿರ್ಲಕ್ಷ್ಯವಹಿಸದಂತೆ ತಾಕೀತು ಮಾಡಿದರು. ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಸದಸ್ಯೆ ಸುನೀತಾ ತಿಪ್ಪಣ್ಣ, ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಇಂಜಿನಿಯರ್‌ಗಳಾದ ಆಸ್ಮಾ, ನಜೀರ್, ವ್ಯವಸ್ಥಾಪಕ ಷಣ್ಮುಖಪ್ಪ, ವಿವಿಧ ಸಮಿತಿ ಸದಸ್ಯರಾದ ಕೆ.ಸನ್ನೀಕ್, ರ್ಇಾನ್, ಗಿರೀಶ್ ಗಾಯಕ್ವಾಡ್ ಇತರರಿದ್ದರು.
ನಗರದ ಸಮಗ್ರ ಅಭಿವೃದ್ಧಿಗೆ ಎಲ್ಲ ಜನಪ್ರತಿನಿಧಿಗಳು ಹೊಣೆಗಾರರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಪಂದಿಸಲಿ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮನವಿ ಮಾಡಿದರು.ನಗರದ ಆನೆಗೊಂದಿ ರಸ್ತೆಯಲ್ಲಿ ಹಾಳಾಗಿರುವ ರಸ್ತೆ ದುಸ್ಥಿತಿಯನ್ನು ಬೆಂಬಲಿಗರೊಂದಿಗೆ ಸೋಮವಾರ ವೀಕ್ಷಿಸಿ ಮಾತನಾಡಿದರು. ನಗರದ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ನೈರ್ಮಲೀಕರಣ ಹದಗೆಟ್ಟಿದೆ. ಕ್ಷೇತ್ರದ ಶಾಸಕ ಸ್ಥಾನ ಅನರ್ಹಗೊಂಡ ಹಿನ್ನೆಲೆಯಲ್ಲಿ ಉಸ್ತುವಾರಿಗಳಿಲ್ಲದಂತಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಮತ್ತು ಸಚಿವ ಶಿವರಾಜ ತಂಗಡಗಿ ಸ್ಪಂದಿಸಬೇಕಿದ್ದು, ಅನುದಾನ ಬಿಡುಗಡೆಯೊಂದಿಗೆ ಕಾಮಗಾರಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಅಯೂಬ್‌ಖಾನ್, ಹನುಮಂತರಾಯ ಇತರರಿದ್ದರು.
ನಗರದ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸಂಸದ ಕೆ.ರಾಜಶೇಖರ್ ಹಿಟ್ನಾಳ್ ನಗರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ರಸ್ತೆಗಳಲ್ಲಿನ ಗುಂಡಿ ಮುಚ್ಚಲು 15 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ. | ಮನೋಹರಸ್ವಾಮಿ ಹಿರೇಮಠ ವಿಪಕ್ಷನಾಯಕ ನಗರಸಭೆ ಗಂಗಾವತಿ