

ಗಂಗಾವತಿ: ವಸತಿ ನಿಲಯ ಮತ್ತು ಕ್ರೀಡಾ ಮೈದಾನ ನಿರ್ಮಿಸುವಂತೆ ಒತ್ತಾಯಿಸಿ ನಗರದ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಭಾನುವಾರ ರಾಯಚೂರು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಜಿ.ಶ್ರೀಧರ ನೇತೃತ್ವದಲ್ಲಿ, ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಸಲ್ಲಿಸಿದರು.
ಕೃಷಿ ಕಾಲೇಜು 2020ರಲ್ಲಿ ಆರಂಭವಾಗಿದ್ದು, ಈವರೆಗೆ ವಸತಿ ನಿಲಯದ ವ್ಯವಸ್ಥೆಯಿಲ್ಲ. ರೈತ ಭವನದಲ್ಲಿ ವಾಸಿಸುವ ಸ್ಥಿತಿಯಿದ್ದು, ದೂರದಲ್ಲಿರುವ ಭೋಜನಾಲಯಕ್ಕೆ ಹೋಗಬೇಕಿದ್ದರಿಂದ ಸಮಯ ಸಾಕಾಗುತ್ತಿಲ್ಲ. ಒಂದು ಕೊಠಡಿಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರಬೇಕು. ಕ್ರೀಡಾ ಮೈದಾನದ ಕೊರತೆಯೂ ಕಾಡುತ್ತಿದೆ. ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಕೃಷಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನೆರವು ಪಡೆಯಲಾಗುವುದು ಎಂದರು. ವಿದ್ಯಾರ್ಥಿಗಳಾದ ಹೊನ್ನಪ್ಪ, ಭವಾನಿ, ಸಿ.ಎನ್.ಹೇಮಂತ, ಸಂಪ್ರೀತಾ, ರಂಜಿತಾ, ರಫೀಕ್, ನರೇಂದ್ರ, ಸಂಕೇತರೆಡ್ಡಿ ಇತರರಿದ್ದರು.