

ನುಡಿ ನಮನ, ಗೀತಗಾಯನ ಕಾರ್ಯಕ್ರಮ
ಗಂಗಾವತಿ: ಮನುಷ್ಯ ಸಂಕುಲ ಇರುವವರೆಗೂ ಗಾಯನ ಲೋಕದಲ್ಲಿ ಅಜರಾಮರಾದ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಹಾಡುಗಳ ನೆನಪು ನಿರಂತರವಾಗಲಿವೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಜಿಲ್ಲಾ ಕಲಾವಿದರ ಕಲ್ಯಾಣ ವೇದಿಕೆ, ಅರ್ಕೇಸ್ಟ್ರಾ ಮಾಲೀಕರು ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಎಸ್ಪಿಬಿ ಸ್ಮರಣಾರ್ಥ ನುಡಿ ನಮನ ಮತ್ತು ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಧನೆಯಿಂದ ಜನಮಾನಸದಲ್ಲಿ ಉಳಿಯಬೇಕಿದ್ದು, ಅಂತಹ ಸಾಧನೆ ಎಸ್ಪಿಬಿ ಮಾಡಿದ್ದಾರೆ. ಬಹುತೇಕ ಭಾಷೆಗಳಲ್ಲಿ 40ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ ಎಸ್ಪಿಬಿ ಗಾಯನ ಲೋಕದ ನಕ್ಷತ್ರ ಎಂದು ಬಣ್ಣಿಸಿದರು.
ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಮಾತನಾಡಿ, ಯುವ ಕಲಾವಿದರಿಗೆ ಸ್ಫೂರ್ತಿಯಾಗಿದ್ದ ಎಸ್ಪಿಬಿ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದರು.
ಸಂಘದ ತಾಲೂಕಾಧ್ಯಕ್ಷ ಪಂಪಾಪತಿ ಇಂಗಳಗಿ ಪ್ರಾಸ್ತಾವಿಕ ಮಾತನಾಡಿದರು. ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ, ಅಂತರಾಷ್ಟ್ರೀಯ ಕಲಾವಿದ ಜಗನ್ನಾಥ ಸೇರಿ ತಾಲೂಕಿನ 30ಕ್ಕೂ ಹೆಚ್ಚು ಕಲಾವಿದರು ಏಕಕಾಲಕ್ಕೆ ಹಾಡು ಹಾಡಿ ವಿಶಿಷ್ಟ ರೀತಿಯಲ್ಲಿ ನುಡಿನಮನ ಸಲ್ಲಿಸಿದರು.
ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ತಜ್ಞ ವೈದ್ಯರಾದ ಸಿ.ಬಿ.ಚಿನಿವಾಲರ್, ಬಸವರಾಜ ಸಿಂಗನಾಳ್, ಜಿ.ಎ.ಜೀಡಿ, ಪೌರಾಯುಕ್ತ ಅರವಿಂದ ಜಮಖಂಡಿ, ವೇದಿಕೆ ಗೌರವಾಧ್ಯಕ್ಷ ಖಾಜಾವಲಿ, ಸಂ.ಸಂಚಾಲಕ ಮಿಮಿಕ್ರಿ ಮಾರೇಶ, ಜಿಲ್ಲಾಧ್ಯಕ್ಷ ವಿಜಯಕುಮಾರ ವಿಶ್ವಕರ್ಮ, ಪದಾಧಿಕಾರಿಗಳಾದ ರೇಷ್ಮಾ, ವೀಣಾಮುದ್ಗಲ್, ಶಿವಪ್ಪ ಹುಳ್ಳಿ, ಗವೀಶ ಬಸಾಪಟ್ಟಣ, ಪ್ರದೀಪ ಹೊಸಳ್ಳಿ, ಸಂಗು ಹಿರೇಮಠ, ಗೋಪಾಲ ಗೊಲ್ಲರ್, ಪರಶುರಾಂ ದೇವರಮನಿ, ಮೋಹನ ವಡ್ರಹಟ್ಟಿ ಇತರರಿದ್ದರು.