

ಗಂಗಾವತಿ: ಕಿಷ್ಕಿಂಧಾ ಭಾಗದ ಯಾವುದೇ ಕಾಮಗಾರಿಗಳನ್ನು ಪಾರಂಪರಿಕ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಿದ್ದು, ಸಾಂಸ್ಕೃತಿಕ ಶೈಲಿಯ ಸ್ಪರ್ಶ ನೀಡಬೇಕಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ತಾಲೂಕಿನ ಆನೆಗೊಂದಿಯಲ್ಲಿ ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನವವೃಂದಾವನಗಡ್ಡಿ ಸಂಪರ್ಕದ ತುಂಗಭದ್ರಾ ನದಿ ತೀರದಲ್ಲಿ ತುಂಗಾರತಿ ನಿರ್ವಹಿಸಲು ಪೂರಕವಾದ ವೇದಿಕೆ ನಿರ್ಮಾಣವಾಗಬೇಕಿದ್ದು, ಗ್ರಾಮದ ಐತಿಹಾಸಿಕ ಪ್ರದೇಶಗಳ ಸಂಪರ್ಕದ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಬೇಕು. ಪಾರಂಪರಿಕ ರೀತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಯಾಗಬೇಕಿದ್ದು, ಭಕ್ತರು ಮತ್ತು ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಗ್ರಾಮಕ್ಕೆ ಗತ ವೈಭವ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಯೋಜನೆ ರೂಪಿಸಬೇಕಿದೆ. ಕಾಮಗಾರಿ ವಿಳಂಬಕ್ಕೆ ಅವಕಾಶ ನೀಡದೇ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದರು.
ನಂತರ ಗ್ರಾಪಂ ಸಭಾಂಗಣದಲ್ಲಿ ಸಭೆ ಆಯೋಜಿಸಿ ಗ್ರಾಮದಲ್ಲಾಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಮತ್ತು ಸದಸ್ಯರೊಂದಿಗೆ ಚರ್ಚಿಸಿದರು.