

ಗಂಗಾವತಿ: ಜಿಲ್ಲೆಯ ಕೆರೆ ತುಂಬಿಸುವ ಯೋಜನೆಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಹಾಗೂ ಅನುದಾನ ದುರ್ಬಳಕೆಯಾಗಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಎಚ್‌ಆರ್‌ಜಿ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. 13 ಕೋಟಿ ರೂ. ವೆಚ್ಚದಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಕಾಮ ಗಾರಿ ಪೂರ್ಣಗೊಂಡಿದೆ. ಇದನ್ನು ಪರಿಶೀಲಿಸಿದ್ದು, ಅವ್ಯವಹಾರವಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ದೂರು ಬಂದಿದ್ದು, ಮರು ಪರಿಶೀಲಿಸುವೆ. ರಾಜ್ಯದ ಎಲ್ಲ ಕ್ಷೇತ್ರ ಅಭಿವೃದ್ಧಿಯಾಗುತ್ತಿದ್ದು, ಯಾವುದನ್ನು ನಿರ್ಲಕ್ಷಿಸಿಲ್ಲ. ಶಾಸಕರು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವುದನ್ನು ಬಿಟ್ಟು ಸರ್ಕಾರ ಟೀಕಿಸುವುದಕ್ಕೆ ಸೀಮಿತವಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ಹೆಸರು ಹೇಳದೆ ಟೀಕಿಸಿದರು.
ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ಆಂಧ್ರ ಮತ್ತು ತೆಲಂಗಾಣ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು. ನಂತರ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಮಾಜಿ ಎಂಎಲ್ಸಿಗಳಾದ ಎಚ್.ಆರ್.ಶ್ರೀನಾಥ, ಕರಿಯಣ್ಣ ಸಂಗಟಿ, ಪ್ರಮುಖರಾದ ಎಂ.ಸರ್ವೇಶ, ರಾಜೋಳ್ಳಿ ಶ್ರೀನಿವಾಸ, ರಾಜಶೇಖರ ಮುಷ್ಟೂರು ಇತರರಿದ್ದರು.
ಪಕ್ಷದಲ್ಲಿ ಎಲ್ಲ ಮುಖಂಡರನ್ನು ಸಮಾನಾಗಿ ಕಾಣಲಾಗುತ್ತಿದೆ. ಜಿಲ್ಲೆಯ ಮಾಜಿ ಜನಪ್ರತಿನಿಧಿಗಳಿಗೂ ಪಕ್ಷದಲ್ಲಿ ಸ್ಥಾನಮಾನ ದೊರೆಯಲಿದ್ದು, ಎಲ್ಲರೊಂದಿಗೆ ಕೆಪಿಸಿಸಿ ಸಂಪರ್ಕದಲ್ಲಿದೆ. ಪಕ್ಷಕ್ಕಾಗಿ ದುಡಿದವರಿಗೆ ಮುಂದೊಂದು ದಿನ ಅಧಿಕಾರ ದೊರೆಯಲಿದೆ. | ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಸಚಿವ