

ಗಂಗಾವತಿ: ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಅರಿವು ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.
ನಗರದ ತಾಪಂ ಆವರಣದ ಸಾಮರ್ಥ್ಯ ಸೌಧದಲ್ಲಿ ಅರಿವು ಕೇಂದ್ರಗಳ ಸಲಹಾ ಸಮಿತಿ ಸದಸ್ಯರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಅನುಕೂಲವಾಗುವ ದಷ್ಟಿಯಿಂದ ಸರ್ಕಾರಿ ಅರಿವು ಯೋಜನೆ ಜಾರಿಗೆ ತಂದಿದೆ. ಕೇಂದ್ರಗಳಲ್ಲಿ ದಿನಪತ್ರಿಕೆ, ಕಥೆ, ಸಾಹಿತ್ಯ ಪುಸ್ತಕಗಳಿದ್ದು, ಸ್ಪರ್ಧಾತ್ಮಕ ವಿಷಯ ಸಂಬಂಧಿಸಿದ ಪುಸ್ತಕಗಳಿವೆ. ಇಲ್ಲಿ ಹಲವು ವಿಷಯಗಳನ್ನು ಮನನ ಮಾಡಿಕೊಳ್ಳಬಹುದಾಗಿದೆ. ಕಂಪ್ಯೂಟರ್ ಶಿಕ್ಷಣ ಕಲಿಕೆಗಾಗಿ ಎಲ್ಲ ಕೇಂದ್ರಗಳಲ್ಲಿ ಕಂಪ್ಯೂಟರ್‌ಗಳಿವೆ. ಸದ್ಬಳಕೆಯಾಗಬೇಕಿವೆ. ಸಲಹಾ ಸಮಿತಿ ಸದಸ್ಯರು ಜಾಗೃತಿ ಮೂಡಿಸುವುದರ ಜತೆಗೆ ಮೇಲ್ವಿಚಾರಣೆ ಜವಾಬ್ದಾರಿವಹಿಸಿಕೊಳ್ಳುವಂತೆ ಸಲಹೆ ನೀಡಿದರು.
ಅರಿವು ಕೇಂದ್ರದ ಉದ್ದೇಶ, ನಿರ್ವಹಣೆ ಜವಾಬ್ದಾರಿ ಮತ್ತು ಜಾಗೃತಿ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶೇಖರಪ್ಪ ಸಿಂಧೋಗಿ, ದೇವರಾಜ್ ಮಾಹಿತಿ ನೀಡಿದರು. ವಿಷಯ ನಿರ್ವಾಹಕ ಶಿವಮೂರ್ತೆಯ್ಯ ಕಂಪಪೂ ಮಠ ಸೇರಿ ವಿವಿಧ ಗ್ರಾಪಂ ಅಧ್ಯಕ್ಷ, ಪಿಡಿಒ, ಗ್ರಂಥಾಲಯ ಮೇಲ್ವಿಚಾರಕರು ಮತ್ತು ಸಲಹಾ ಸಮಿತಿ ಸದಸ್ಯರಿದ್ದರು.