

ಗಂಗಾವತಿ: ಮುಂಗಾರ ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯವಾಗಿರುವ ರಸಗೊಬ್ಬರ ದಾಸ್ತಾನಿದ್ದು, ಕೊರತೆಯಾಗದಂತೆ ಎಚ್ಚರಿಕೆವಹಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಹೇಳಿದರು.
ನಗರದ ಗೋದಾಮಿನಲ್ಲಿ ದಾಸ್ತಾನಿರುವ ರಸಗೊಬ್ಬರಗಳ ಮಾಹಿತಿ ಪಡೆದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಗಳಲ್ಲಿ ಮುಂಗಾರು ಹಂಗಾಮಿಗೆ ರೈತರು ಸಜ್ಜಾಗಿದ್ದು, ಮಳೆ ಉತ್ತಮವಾಗಿದೆ.
ಕಷಿ ಚಟುವಟಿಕೆಗಳು ಆರಂಭವಾಗಿದ್ದರಿಂದ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ತ್ರಿವಳಿ ತಾಲೂಕಿನ 10 ಮಾರಾಟ ಕೇಂದ್ರದಲ್ಲಿ ರಸಗೊಬ್ಬರ ಮಾರಾಟ ವ್ಯವಸ್ಥೆ ಮಾಡಲಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಸಲ್ ಬಿಮಾ (ವಿಮಾ) ಯೋಜನೆಯಡಿ ಕಷಿ ಬೆಳೆಗಳಿಗೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬೇಕು. ಮಳೆಯಾಶ್ರಿತ ಬೆಳೆಗಳಾದ ಜೋಳ, ನವಣೆ, ಸಜ್ಜೆ, ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ನೀರಾವರಿ ಬೆಳೆಗಳಾದ ಭತ್ತಕ್ಕೂ ವಿಮೆ ಮಾಡಿಸಬಹುದಾಗಿದ್ದು, ನೋಂದಣಿಗೆ ಜು.31 ಕೊನೆ ದಿನ. ಮಾಹಿತಿಗೆ ಮೊ: 9742161333, 9742603654, 9164098169 ಸಂಪರ್ಕಿಸುವಂತೆ ತಿಳಿಸಿದರು.