ಮಾಸಾಂತ್ಯದೊಳಗೆ ಜೆಜೆಎಂ ಮುಗಿಸದಿದ್ದರೆ ದಂಡದ ಎಚ್ಚರಿಕೆ

040422 gangavati JMM Work Special meeting
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಸೋಮವಾರ ಜೆಜೆಎಂ ಯೋಜನೆ ಕಾಮಗಾರಿಯ ಉಪಗುತ್ತಿಗೆದಾರರ ವಿಶೇಷ ಸಭೆಯಲ್ಲಿ ಗ್ರಾಮೀಣ ಕುಡಿವ ನಿರು ಮತ್ತು ನೈರ್ಮಲ್ಯ ವಿಭಾಗದ ಎಇಇ ಎಸ್.ಸತೀಶ್ ಮಾತನಾಡಿದರು.
Published on

ಗಂಗಾವತಿ: ಏಪ್ರಿಲ್ ಅಂತ್ಯದೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ದಂಡ ಹಾಕಲಾಗುವುದು ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಎಸ್.ಸತೀಶ್ ಎಚ್ಚರಿಕೆ ನೀಡಿದರು.

ತಾಪಂ ಮಂಥನ ಸಭಾಂಗಣದಲ್ಲಿ ಜೆಜೆಎಂ ಯೋಜನೆಯಡಿ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ಕೈಗೊಂಡ ಕಾಮಗಾರಿಯ ಉಪಗುತ್ತಿಗೆದಾರರ ವಿಶೇಷ ಸಭೆಯಲ್ಲಿ ಮಾತನಾಡಿದರು. 2021ರ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭವಾಗಿದ್ದರೂ ಈವರೆಗೆ ಶೇ.30 ಕಾಮಗಾರಿ ಪೂರ್ಣಗೊಂಡಿಲ್ಲ. ಸಮಸ್ಯೆಗಳನ್ನು ಹೇಳುವ ಬದಲು ಪರಿಹಾರಕ್ಕೆ ಮಾರ್ಗ ಹುಡುಕಬೇಕು. ಇತ್ಯರ್ಥಕ್ಕೆ ಇಲಾಖೆ ಸಿಬ್ಬಂದಿ ನೆರವು ಪಡೆಯಬೇಕು. 173 ಗ್ರಾಮಗಳ ಪೈಕಿ 50 ಹಳ್ಳಿಗಳಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡರೂ ಗ್ರಾಪಂಗೆ ಹಸ್ತಾಂತರವಾಗಿಲ್ಲ. ಕೆಲ ಗ್ರಾಮಗಳಲ್ಲಿ ಕಾಮಗಾರಿ ಆರಂಭವಾಗಿಲ್ಲ. ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ನಿರ್ಲಕ್ಷಿಸಿದರೆ ಟೆಂಡರ್ ಮೊತ್ತಕ್ಕೆ ಶೇ.0.1 ನಿತ್ಯ ದಂಡ ಹಾಕಲಾಗುವುದು. ನಿಗದಿತ ಅವಧಿಯೊಳಗೆ ಕಾಮಗಾರಿ ನಿರ್ವಹಿಸದಿದ್ದರೆ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರ ವಿರುದ್ಧವೂ ಪ್ರಕರಣ ದಾಖಲಿಸಲು ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದರು.

ಗುತ್ತಿಗೆದಾರರ ಪರ ಚಂದ್ರಶೇಖರ್ ಮುಸಾಲಿ ಮತ್ತು ಲಂಕೇಶ ಗುಳದಾಳ್ ಮಾತನಾಡಿ, ಕಾಮಗಾರಿ ಪೂರ್ಣಗೊಳಿಸಿದರೂ ಸುಪರ್ದಿಗೆ ಪಡೆಯಲು ಗ್ರಾಪಂ ಒಪ್ಪುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಪೈಪ್‌ಲೈನ್ ಕಾಮಗಾರಿ ನಿರ್ವಹಿಸಲು ಸಂಘಟನೆಗಳು ಮತ್ತು ಪ್ರಭಾವಿಗಳು ಅವಕಾಶ ನೀಡುತ್ತಿಲ್ಲ. ಕೆಲವೆಡೆ ನಲ್ಲಿ ಹಾಕಲು ಜಗಳವಾಗುತ್ತಿದ್ದು, ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಘಟನೆಗಳಿವೆ. ಶೇ.50 ಕಾಮಗಾರಿ ನಿರ್ವಹಿಸಿದರೂ ಬಿಲ್ ಪಾವತಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಇಗಳಾದ ಚಿದಾನಂದ, ಸುರೇಶ, ಸಿದ್ದಪ್ಪ, ಗುತ್ತಿಗೆದಾರರಾದ ವಿ.ವಿ.ಪ್ರಸಾದ, ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net