ಬೇಲ್‌ಗೆ ಮರುಗದ ಮರಕುಂಬಿ

Marakumbi untouchability case
2014 ಆ.28ಂದು ಮರಕುಂಬಿಯಲ್ಲಿ ದಲಿತರು ಮತ್ತು ಸವಣಿರ್ಯರ ನಡುವಿನ ಗಲಾಟೆಯಲ್ಲಿ ದಲಿತರ ಗುಡಿಸಲೊಂದು ಸುಟ್ಟಿರುವುದು. (ಕಡತ ಚಿತ್ರ)
Published on

ಗಂಗಾವತಿ: ತಾಲೂಕಿನ ಮರಕುಂಬಿ ಅಸ್ಪಶ್ಯತೆ ಮತ್ತು ದಲಿತರ ಗುಡಿಸಲುಗಳಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೊಳಗಾಗಿದ್ದ ಆರೋಪಿಗಳಿಗೆ ಜಾಮೀನು ಮಂಜೂರಾದರೂ ಗ್ರಾಮದಲ್ಲಿ ಸಂಭ್ರಮ ಕಾಣುತ್ತಿಲ್ಲ.

2014 ಆ.28ರಂದು ಮರಕುಂಬಿಯಲ್ಲಿ ದಲಿತರು ಮತ್ತು ಸವರ್ಣಿಯರ ನಡುವೆ ಗಲಾಟೆ ನಡೆದಿದ್ದು, ದಲಿತ ಕೇರಿಯ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 13 ಜನರು ಗಾಯಗೊಂಡಿದ್ದರು. 117ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 10ವರ್ಷ ಸುದೀರ್ಘ ವಿಚಾರಣೆ ನಂತರ 101 ಅಪರಾಧಿಗಳಿಗೆ ಅ.24ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದರಲ್ಲಿ ಒಬ್ಬ ಅಪರಾಧಿ ಮೃತಪಟ್ಟಿದ್ದರು. ಎ1 ಆರೋಪಿ ಮಂಜುನಾಥ ಜಾಮೀನಿಗೆ ಅರ್ಜಿ ಸಲ್ಲಿಸದಿದ್ದರಿಂದ 99 ಆರೋಪಿಗಳಿಗೆ ಧಾರವಾಡ ಹೈಕೋರ್ಟ್ ಜಾಮೀನು ನೀಡಿದೆ.

ಶಾಲೆಯಲ್ಲಷ್ಟೇ ಗದ್ದಲ: ಜೀವಾವಧಿ ಶಿಕ್ಷೆ ತೀರ್ಪು ಪ್ರಕಟವಾಗಿದ್ದರಿಂದ ಗ್ರಾಮದ ಸವರ್ಣಿಯರು ಮೌನಕ್ಕೆ ಜಾರಿದ್ದು, ಮಾಧ್ಯಮ ಮತ್ತು ಪೊಲೀಸರೊಂದಿಗೆ ಮಾತನಾಡುತ್ತಿಲ್ಲ. ಅಪರಾಧಿಗಳ ಕುಟುಂಬ ಸದಸ್ಯರು ಕಣ್ಣೀರಲ್ಲಿ ದಿನದೂಡುತ್ತಿದ್ದು, ಯಾರಿಗೂ ಸ್ಪಂದಿಸುತ್ತಿಲ್ಲ. ಅಪರಾಧಿಗಳು ಬಳ್ಳಾರಿ ಜೈಲಿಗೆ ಶ್‌ಟಿ ಆಗುತ್ತಿದ್ದಂತೆ ಕುಟುಂಬ ಸದಸ್ಯರಲ್ಲಿ ದುಗುಡ ಮತ್ತಷ್ಟು ಹೆಚ್ಚಾಗಿತ್ತು. ವಿಶೇಷ ನ್ಯಾಯಾಲಯ ಜಾಮೀನು ನೀಡಿದರೂ ಗ್ರಾಮದಲ್ಲಿ ಈಗಲೂ ನೀರವ ಮೌನ ಆವರಿಸಿದೆ. ಪ್ರತಿಕ್ರಿಯೆ ನೀಡಲು ಒಬ್ಬರೂ ಮುಂದೆ ಬರುತ್ತಿಲ್ಲ. ಮಾಧ್ಯಮದವರನ್ನು ಖಳರಂತೆ ನೋಡುತ್ತಿದ್ದಾರೆ. ದಲಿತ ಕೇರಿಯಲ್ಲೂ ಮೌನ ಆವರಿಸಿದ್ದು, ಜಾಮೀನು ದೊರೆತ ಬಗ್ಗೆ ದುಃಖವೂ ಇಲ್ಲ, ಸಂಭ್ರಮವೂ ಇಲ್ಲ. ಶಾಲೆ ಮಾತ್ರ ಎಂದಿನಂತೆ ವಿದ್ಯಾರ್ಥಿಗಳ ಗದ್ದಲದಲ್ಲಿ ಮುಳುಗಿತ್ತು.

ಗುಂಪು ಚರ್ಚೆ: ಭತ್ತ ಕೊಯ್ಲು ಶುರುವಾಗಿದ್ದರಿಂದ ಗ್ರಾಮದ ಬಹುತೇಕ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಕೆಲ ಗಂಡಸರು, ಅಂಗಡಿ, ಪಾನ್‌ಶಾಪ್, ದೇವಾಲಯ ಕಟ್ಟೆ ಮುಂದೆ ಪ್ರಕರಣದ ಪರ, ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಜಾಮೀನು ಸಿಕ್ಕಿದೆಯಂತೆ, ನಮಗೆ ಮಾಹಿತಿಯಿಲ್ಲ. ಕೊನೆಗೂ ದೇವರು ಕರುಣೆ ತೋರಿದ್ದಾನೆ. ತಪ್ಪು ಮಾಡದಿದ್ದರೂ ಕಳ್ಳರಂತೆ ಬಿಂಬಿಸಿದ್ದಾರೆ. ಸುಳ್ಳು ಸಾಕ್ಷಿ ಹೇಳಿದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಹೇಸರೇಳದ ವೃದ್ಧರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಅ.23ರಿಂದಲೇ ಗ್ರಾಮದಲ್ಲಿ ಠಿಕಾಣಿ ಹೂಡಿರುವ ಮೀಸಲು ಪಡೆ ಪೊಲೀಸರು ಇನ್ನಷ್ಟು ಅಲರ್ಟ್ ಆಗಿದ್ದು, ಗ್ರಾಮಕ್ಕೆ ಬರುವ ಹೊಸಬರನ್ನು ವಿಚಾರಿಸುತ್ತಿದ್ದಾರೆ. ದಯವಿಟ್ಟು ಗ್ರಾಮಸ್ಥರನ್ನು ಮಾತನಾಡಿಸಬೇಡಿ, ಮೊದಲೇ ಆಕ್ರೋಶದಲ್ಲಿದ್ದಾರೆ. ಜಾಮೀನು ಸಿಕ್ಕರೂ ಸಂಭ್ರಮವಿಲ್ಲ ಎಂದು ನೆರೆಯ ಗ್ರಾಮಸ್ಥರೊಬ್ಬರು ಮಾಧ್ಯಮದವರಿಗೆ ಮನವಿ ಮಾಡಿಕೊಂಡರು.

ದೂರ ಉಳಿದ ಜನಪ್ರತಿನಿಧಿಗಳು: 2014ರಲ್ಲಿ ಘಟನೆ ನಡೆದಾಗ ಎರಡು ಗುಂಪುಗಳನ್ನು ಸಂತೈಸಲು ಅಂದಿನ ಸಚಿವ ಶಿವರಾಜ ತಂಗಡಗಿ, ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದ ಬಿಜೆಪಿ, ಕಾಂಗ್ರೆಸ್ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿದ್ದರು. ದಲಿತರ ಪರವಾಗಿಯೇ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳಿದ್ದಾರೆ ಎಂಬ ಆರೋಪ ಸವರ್ಣಿಯರದ್ದಾಗಿತ್ತು. ಬದಲಾದ ವಿದ್ಯಮಾನದಲ್ಲಿ ಸವರ್ಣಿಯರ ಪರ ಅನುಕಂಪವಿದ್ದರೂ, ತೀರ್ಪು ಪ್ರಶ್ನಿಸುವಂತಿಲ್ಲ. ಶಿಕ್ಷೆ ಪ್ರಕಟವಾದ ನಂತರ ಒಬ್ಬ ಜನಪ್ರತಿನಿಧಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ, ಪರಿಸ್ಥಿತಿ ಅರಿತಿಲ್ಲ. ಪ್ರತಿಕ್ರಿಯೆಗೂ ಒಪ್ಪುತ್ತಿಲ್ಲ. ಸದ್ಯ ಗ್ರಾಮ ಒಂಟಿಯಾಗಿದ್ದು, ಗ್ರಾಮಸ್ಥರ ಧ್ವನಿಯೂ ಕ್ಷೀಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net