ಮಳೆ-ಗಾಳಿಯಿಂದ ನೆಲಕ್ಕೊರಗಿದ ಭತ್ತ

Untitled design(2)
ಮಳೆ ಮತ್ತು ಗಾಳಿಯಿಂದ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿನ ಭತ್ತ ಬೆಳೆ ನೆಲಕ್ಕೊರಗಿರುವುದು.
Published on

ಗಂಗಾವತಿ: ನಗರ ಮತ್ತು ತಾಲೂಕುದಾದ್ಯಂತ ಗುರುವಾರ ಸುರಿದ ಮಳೆ ಮತ್ತು ಬೀಸಿದ ಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭತ್ತದ ಬೆಳೆ ನೆಲಕ್ಕೊರಗಿದೆ.

ಬೆಳಗಿನ ಜಾವ 4ರಿಂದ ಮಳೆ ಶುರುವಾಗಿದ್ದು, ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಿಡಿಲು, ಗುಡುಗುಮಿಶ್ರಿತ ಮಳೆಯಿಂದ ಎಲ್ಲೆಂದರಲ್ಲಿ ನೀರು ನಿಂತಿದ್ದು, ಗುಡ್ಡದಪ್ರದೇಶದಿಂದ ಹರಿದು ಬಂದ ನೀರು ಚರಂಡಿ ಸೇರಿದ್ದರಿಂದ ಕೊಳಚೆ ನೀರೆಲ್ಲ ರಸ್ತೆ ಮೇಲೆ ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಮುಜಾವರ್‌ಕ್ಯಾಂಪ್, ಮಹೆಬೂಬ್‌ನಗರ, ಎಚ್‌ಆರ್‌ಎಸ್ ಕಾಲನಿ, ಗುಡ್ಡದ ಕ್ಯಾಂಪ್ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಕಂದಾಯ ಭವನ, ಚಂದ್ರಹಾಸ ಚಿತ್ರಮಂದಿರ ಬಳಿಯ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು.

ಮಳೆ, ಗಾಳಿಯಿಂದ ತಾಲೂಕಿನ ಆನೆಗೊಂದಿ, ಮರಳಿ, ಶ್ರೀರಾಮನಗರ, ಢಣಾಪುರ, ಹೆಬ್ಬಾಳ ಸೇರಿ ಇತರೆ ಭಾಗದಲ್ಲಿನ ತೆನೆ ತುಂಬಿದ ಭತ್ತದ ಬೆಳೆ ನೆಲಕ್ಕೊರಗಿದ್ದು, ರೈತರಿಗೆ ತೊಂದರೆಯಾಗಿದೆ. ಕೆಲವೆಡೆ ಒಣಗಲು ಹಾಕಿದ್ದ ಭತ್ತದ ರಾಶಿಗೆ ಏಕಾಏಕಿ ಮಳೆ ಬಂದಿದ್ದರಿಂದ ರಕ್ಷಿಸಲು ರೈತರು ಹರಸಾಹಸ ನಡೆಸಿದರು. ಅಂದಾಜು 400 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಬೆಳೆ ನೆಲಕ್ಕೊರಗಿರುವ ಬಗ್ಗೆ ವರದಿಯಾಗಿದೆ.

ಮಳೆ ವಿವರ: ತಾಲೂಕಿನ ಪ್ರಗತಿನಗರದಲ್ಲಿ 28.3 ಮಿ.ಮೀ,, ವೆಂಕಟಗಿರಿಯಲ್ಲಿ 10.7ಮಿ.ಮೀ, ಗಂಗಾವತಿಯಲ್ಲಿ 25 ಮಿ.ಮೀ ಮತ್ತು ವಡ್ಡರಹಟ್ಟಿಯಲ್ಲಿ 18.1 ಮಿ.ಮೀ.ಮಳೆಯಾದ ಬಗ್ಗೆ ವರದಿಯಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net