

ಗಂಗಾವತಿ: ವೀರಶೈವ ಧರ್ಮ ಪ್ರಾಚೀನವಾದದ್ದು, ವೀರಶೈವ ಧರ್ಮಕ್ಕಿರುವ ಶಕ್ತಿ ಲಿಂಗಾಯತ ಧರ್ಮಕ್ಕಿಲ್ಲ ಎಂದು ಮುಂಡರಗಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ನಾಡೋಜ ಡಾ.ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಶ್ರೀ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿಯಿಂದ ಬುಧವಾರ ಹಮ್ಮಿಕೊಂಡ ಲಿಂ.ಹಾನಗಲ್ ಕುಮಾರ ಮಹಾಶಿವಯೋಗಿಗಳ 158ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಮಹಾಸಭಾ ಮೂಲಕ ವೀರಶೈವ ಧರ್ಮ ಜಗತ್ತಿನಾದ್ಯಂತ ಪರಿಚಯಿಸಿದ ಹಾನಗಲ್ ಕುಮಾರ ಶಿವಯೋಗಿಗಳ ಆಚಾರ, ವಿಚಾರ, ಜೀವನ ಧ್ಯೇಯ ತಿಳಿಸುವ ಅಗತ್ಯವಿದೆ. ವೀರಶೈವ ಧರ್ಮದ ಪರ್ಯಾಯ ಅರ್ಥವೇ ಲಿಂಗಾಯತವಾಗಿದ್ದು, ಲಿಂಗಾಯತ ಎಂಬುವುದು ಪ್ರತ್ಯೇಕ ಧರ್ಮವಲ್ಲ. ಆಧ್ಯಾತ್ಮ, ತತ್ವ ಶ್ರೀಮಂತಿಕೆಯಿಂದ ವೀರಶೈವ ಧರ್ಮ ಕೂಡಿದ್ದು, ವೀರಶೈವ ಧರ್ಮದ ಮಹತ್ವ ಅರಿಯದವರು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಬಸವಣ್ಣವರ ವಚನದಂತೆ ಕೆಲವರು ನಡೆಯುತ್ತಿಲ್ಲ, ಕುಮಾರ ಶಿವಯೋಗಿಗಳ ಬಗ್ಗೆ ಲಿಂಗಾಯತ ಧರ್ಮ ಪ್ರತ್ಯೇಕತೆ ಕುರಿತು ಪ್ರತಿಪಾದಿಸುವವರು ಇಲ್ಲಸಲ್ಲದ ಮಾತಗಳನ್ನಾಡುತ್ತಿರುವುದು ಸರಿಯಲ್ಲ. ಕುಮಾರ ಶಿವಯೋಗಿಗಳ ಸ್ಮರಣೆ ಮೂಲಕ ಧರ್ಮ ಮತ್ತು ಆಧ್ಯಾತ್ಮ ವಿಚಾರಗಳನ್ನು ಪರಿಚಯಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಹಾನಗಲ್ ಕುಮಾರೇಶ್ವರರು ಕೇವಲ ಆಧ್ಯಾತ್ಮಕ್ಕೆ ಸೀಮಿತ ಆಗಿರಲಿಲ್ಲ. ಬದಲಾಗಿ ನಾಡಿನ ಎಲ್ಲ ವರ್ಗದ ಜನರ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಇಂಥ ಮಹಾತ್ಮರ ಜೀವನ ಮತ್ತು ಆದರ್ಶ ಬಗ್ಗೆ ತಿಳಿದುಕೊಳ್ಳುವುದು ಗಂಗಾವತಿ ಜನರ ಸೌಭಾಗ್ಯ. ರಾಜ್ಯದ ಶರಣ ಸಂಸ್ಕೃತಿಯನ್ನು ದೇಶದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
10 ದಿನಗಳ ಜಯಂತ್ಯುತ್ಸವ ಕಾರ್ಯಕ್ರಮ ಕುರಿತು ಸಮಿತಿ ಸಂಚಾಲಕ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣಶಿವಾಚಾರ್ಯರು, ಶಿವಯೋಗ ಮಂದಿರದ ಶಿವಲಿಂಗೇಶ್ವರಸ್ವಾಮೀಜಿ, ಚಂದ್ರಶೇಖರಸ್ವಾಮೀಜಿ, ಅರಳಹಳ್ಳಿಯ ಗವಿಸಿದ್ದಯ್ಯಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕರಾದ ಪರಣ್ಣಮುನವಳ್ಳಿ, ಜಿ.ವೀರಪ್ಪ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ತಾಲೂಕಾಧ್ಯಕ್ಷ ಎಚ್.ಎಸ್.ಗಿರೇಗೌಡ, ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹಿರೇಮಠ, ಮಾಜಿ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್, ವಕೀಲ ಸೋಮನಾಥ ಪಟ್ಟಣಶೆಟ್ಟಿ ಇತರರಿದ್ದರು.
ಪೀಠಾಧಿಪತಿಗಳ ಪುರಪ್ರವೇಶ: ಕಾರ್ಯಕ್ರಮಕ್ಕೂ ಮೊದಲು ಪುರ ಪ್ರವೇಶಿಸಿದ ವಿವಿಧ ಪೀಠಾಧಿಪತಿಗಳನ್ನು ನಗರದ ಈರಣ್ಣ ದೇವರ ದೇವಾಲಯದಿಂದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದವರಿಗೆ ಉತ್ಸವ ಜ್ಯೋತಿಯೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆ ಯುದ್ದಕ್ಕೂ ಶ್ರೀಗಳನ್ನು ಮತ್ತು ಉತ್ಸವ ಜ್ಯೋತಿಯನ್ನು ಪುಷ್ಪಾರ್ಪಣೆ ಮೂಲಕ ಜನರು ಸ್ವಾಗತಿಸಿದ್ದು, ಎಲ್ಲ ಸಮುದಾಯದವರು ಭಾಗವಹಿಸಿದ್ದರು. ಸೆ.10ರಿಂದ 20ರವರಿಗೂ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸದ್ಭಾವನಾ ಪಾದಯಾತ್ರೆಯಿದ್ದು, ಸಂಜೆ ಪುರಾಣ ಮಂಟಪದಲ್ಲಿ ಪ್ರವಚನ ಜರುಗಲಿದೆ.
ಜಾತ್ಯತೀತ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುವ ರಾಜಕಾರಣಿಗಳೇ ಜಾತಿ ವ್ಯವಸ್ಥೆ ಪ್ರತಿಪಾದಿಸುತ್ತಿದ್ದಾರೆ. ಉಪಜಾತಿಗಳನ್ನು ಸೃಷ್ಟಿಸಿ ಜಾತಿ ಒಡೆಯುತ್ತಿದ್ದಾರೆ.
ಡಾ.ಅನ್ನದಾನಸ್ವಾಮೀಜಿ
ಮುಂಡರಗಿ ಶ್ರೀ ಅನ್ನದಾನೀಶ್ವರ ಸಂಸ್ಥಾನ ಮಠ