ಪರವಾನಗಿಲ್ಲದೆ ಗಣಿಗಾರಿಕೆ ನಡೆಸಿದರೆ ಕ್ರಮ

Gangavati DC Visit Stone Mining
ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿನ ಪರವಾನಗಿ ಪಡೆದ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಡಿಸಿ ವಿಕಾಸ ಕಿಶೋರ ಸುರಳ್ಕರ್ ನೇತೃತ್ವದ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.
Published on

ಗಂಗಾವತಿ: ತಾಲೂಕಿನ ವೆಂಕಟಗಿರಿ ಮತ್ತು ಗಂಗಾವತಿ ಹೋಬಳಿ ವ್ಯಾಪ್ತಿಯಲ್ಲಿನ ಪರವಾನಗಿ ಪಡೆದ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಡಿಸಿ ಸುರಳ್ಕರ್ ವಿಕಾಸ್ ಕಿಶೋರ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಅಧಿಕೃತ ಮತ್ತು ಅನಧಿಕೃತ ಕಲ್ಲುಗಣಿಗಾರಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಕಲ್ಲು ಕ್ವಾರಿಗಳ ಮಾಲೀಕರೊಂದಿಗೆ ಚರ್ಚಿಸಿ, ಬ್ಲಾಸ್ಟಿಂಗ್ ಬಳಸುತ್ತಿರುವ ಸ್ಫೋಟಕಗಳ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ, ವೆಂಕಟಗಿರಿ, ಗಡ್ಡಿ, ಮಲ್ಲಾಪುರ, ರಾಂಪುರ ವ್ಯಾಪ್ತಿಯಲ್ಲಿ ಸಂಚರಿಸಿ ಪರವಾನಗಿ ಪರಿಶೀಲಿಸಿದ ತಂಡ, ಕಂದಾಯ ಮತ್ತು ಅರಣ್ಯ ವ್ಯಾಪ್ತಿಯಲ್ಲಿನ ಪ್ರದೇಶಗಳನ್ನು ವೀಕ್ಷಿಸಿತು.

ಡಿಸಿ ಮಾತನಾಡಿ, ಗಣಿಗಾರಿಕೆ ಪರವಾನಗಿ ಪರಿಶೀಲಿಸಲು ಕೊಪ್ಪಳ ಮತ್ತು ಗಂಗಾವತಿ ವ್ಯಾಪ್ತಿಯ 15 ಕ್ವಾರಿಗಳಿಗೆ ಭೇಟಿ ನೀಡಲಾಯಿತು. ಸ್ಫೋಟಕ ಬಳಕೆಯ ಸಾಮರ್ಥ್ಯ ಮತ್ತು ಜನವಸತಿ ಪ್ರದೇಶದ ಸ್ಥಿತಿಗತಿ ಬಗ್ಗೆ ಚರ್ಚಿಸಿ, ಉದ್ದೇಶಿತ ಗಣಿಗಾರಿಕೆ ಕಂದಾಯ ಮತ್ತು ಅರಣ್ಯ ಪ್ರದೇಶದ ನಡುವಿನ ಅಂತರದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ಗಣಿಗಾರಿಕೆ ಪರವಾನಗಿ ಮಾನದಂಡದದ ಬಗ್ಗೆ ಅಂತಿಮ ವರದಿ ನೀಡಿದ ನಂತರ ಪರವಾನಗಿ ನವೀಕರಿಸಲಾಗುವುದು. ಪರವಾನಗಿ ಪಡೆಯದೆ ಗಣಿಗಾರಿಕೆ ನಡೆಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಮಾಲೀಕರಿಗೆ ಸೂಚಿಸಿದರು. ತಹಸೀಲ್ದಾರ್ ವರ್ಣಿತ್ ನೇಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಮುತ್ತಯ್ಯ, ರೂಪಾ, ಅರಣ್ಯಾಧಿಕಾರಿ ಶಿವರಾಜ ಮೇಟಿ, ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ, ಸ್ಟೋನ್ ಕ್ರಷರ್‌ಮಾಲೀಕ ಜಾನಕೀ ರಾಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net