

ಗಂಗಾವತಿ: ವಾಲ್ಮೀಕಿ ನಾಯಕ ಸಮುದಾಯದ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಸಮಿತಿ ಸದಸ್ಯರು ನಗರ ಠಾಣೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಪಿಎಸ್‌ಐ ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಜೋಗದ ನಾರಾಯಣಪ್ಪ ನಾಯಕ ಹಾಗೂ ಸಮಾಜದ ತಾಲೂಕು ಸಮಿತಿ ಅಧ್ಯಕ್ಷ ವೀರಭದ್ರಪ್ಪ ನಾಯಕ ಮಾತನಾಡಿ, ಬೆಳಗಾವಿ ಡಿಸಿಸಿ ಚುನಾವಣೆ ವಿಚಾರದಲ್ಲಿ ಮಾಜಿ ಸಂಸದ ರಮೇಶ ಕತ್ತಿ, ನಾಯಕ ಸಮಾಜವನ್ನು ಅವಹೇಳನಕಾರಿ ರೀತಿಯಲ್ಲಿ ನಿಂತಿಸಿದ್ದು ಖಂಡನೀಯ. ಇಂತಹ ಹೇಳಿಕೆಯಿಂದ ರಾಜ್ಯದ 75ಲಕ್ಷಕ್ಕೂ ಹೆಚ್ಚು ನಾಯಕ ಸಮುದಾಯದವರಿಗೆ ನೋವಾಗಿದೆ.
ಚುನಾವಣೆ ಸಂದರ್ಭದಲ್ಲಿ ಸಾಮರಸ್ಯದಿಂದ ವರ್ತಿಸಬೇಕಿದ್ದು, ಅವಹೇಳಕನಾರಿ ಹೇಳಿಕೆಯಿಂದಲ್ಲ. ರಮೇಶ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಮಾಜದ ಮುಖಂಡರಾದ ಜೋಗದ ಹನುಮಂತಪ್ಪ ನಾಯಕ, ಬಸಪ್ಪ ನಾಯಕ, ಪಂಪಣ್ಣ ನಾಯಕ, ಬಳ್ಳಾರಿ ರಾಮಣ್ಣ ನಾಯಕ, ಅರ್ಜುನ ನಾಯಕ, ವೀರಣ್ಣ, ಎ.ಜೆ. ರಂಗನಾಥ, ಹನುಮಂತಪ್ಪ ಚೌಡ್ಕಿ ಇತರರಿದ್ದರು.