

ಗಂಗಾವತಿ: ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ದಾಸೋಹಕ್ಕಾಗಿ ಭಕ್ತರಿಂದ ಸಂಗ್ರಹಿಸಿದ ದವಸ-ಧಾನ್ಯಗಳನ್ನು ವಿಶೇಷ ವಾಹನದಲ್ಲಿ ನಗರದ ಎಪಿಎಂಸಿ ಕಚೇರಿ ಆವರಣದಿಂದ ಗುರುವಾರ ಕಳುಹಿಸಿಕೊಡಲಾಯಿತು.
ನಗರ ಮತ್ತು ಗ್ರಾಮೀಣ ಭಾಗದ ಭಕ್ತರಿಂದ ಸಂಗ್ರಹಿಸಿದ 128 ಕ್ವಿಂಟಾಲ ಅಕ್ಕಿ, 40 ಕ್ವಿಂ ಭತ್ತ, 21 ಕೆಜಿ ಗೋದಿ, 30ಕೆಜಿ ತೊಗರಿ ಬೇಳೆ, 1.64 ಕ್ವಿಂ ಬೆಲ್ಲ, 3ಲೀಟರ್ ತುಪ್ಪ, 92ಕೆಜಿ ಶೇಂಗಾ, 225 ಕೆಜಿ ಸಕ್ಕರೆ ಮತ್ತು 2.65ಲಕ್ಷ ರೂ.ಗಳನ್ನು ಕಳುಹಿಸಿಕೊಡಲಾಯಿತು.
ಸಂಗ್ರಹ ತಂಡದ ಪ್ರತಿನಿಧಿ ಶಿವಪ್ರಕಾಶ ಅಕ್ಕಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ದವಸ, ಧಾನ್ಯ ಮತ್ತು ದೇಣಿಗೆ ಸಂಗ್ರಹಿಸಿದ್ದು, ಭಕ್ತರು ಸ್ವಯಂಪ್ರೇರಣೆಯಿಂದ ನೀಡಿದ್ದಾರೆ. ಜಾತ್ರೆಯ ದಾಸೋಹಕ್ಕಾಗಿ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ. ಎಪಿಎಂಸಿ ಆವರಣದಲ್ಲಿನ ಶ್ರೀ ಚನ್ನಬಸವ ಸ್ವಾಮಿ ದೇವಾಲಯದ ಬಳಿ ರವಾನೆ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಕಳುಹಿಸಿಕೊಡಲಾಯಿತು ಎಂದರು.
ಶ್ರೀಮಠದ ಭಕ್ತರಾದ ಅಕ್ಕಿ ಕೊಟ್ರಪ್ಪ, ವೀರೇಶ ಕಂಪ್ಲಿ, ಚಂದ್ರು ರಾಮತ್ನಾಳ್, ವೀರೇಶ ಓದ್ಸೋಮಠ, ಗವಿಸಿದ್ದಪ್ಪ ಅಕ್ಕಿ, ಹನುಮಂತಪ್ಪ ಜಂತಕಲ್, ಶರಣಯ್ಯಸ್ವಾಮಿ, ಶಿವಪ್ರಕಾಶ, ರವಿಶಾಸಿ ಗವಿಮಠ ಇತರರಿದ್ದರು.