ಜಿಲ್ಲಾ ಸಮ್ಮೇಳನಕ್ಕೆ ಲಿಂಗಾರೆಡ್ಡಿ ಸಾರಥಿ

Gangavathi sahitya sammelana lingareddy v alur president
Published on

ಗಂಗಾವತಿ: ನಗರದಲ್ಲಿ ಆಯೋಜಿಸಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮತ್ತು ನಿರೂಪಕ ಲಿಂಗಾರೆಡ್ಡಿ ವಿ. ಆಲೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಆಯ್ಕೆ ಕುರಿತು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೊಪ್ಪಳದ ಗಾಣಿಗೇರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಲಿಂಗಾರೆಡ್ಡಿ ವಿ.ಆಲೂರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ನಿರೂಪಣೆ, ಗೋಷ್ಠಿ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ಸಮ್ಮೇಳನವನ್ನು ಮಾ.27 ಮತ್ತು 28ರಂದು ಆಯೋಜಿಸಿದ್ದು, ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಿಸಲಾಗುವುದು. ಸಮಿತಿಗಳ ರಚನೆ, ಆಹ್ವಾನ ಪತ್ರಿಕೆ, ಅತಿಥಿಗಳ ಆಹ್ವಾನ ಸೇರಿ ಇತರ ಚಟುವಟಿಕೆಗಳನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು. ಎರಡು ದಿನದ ಸಮ್ಮೇಳನದಲ್ಲಿ ಐದು ಸಾವಿರ ಆಸನ ವ್ಯವಸ್ಥೆಯಿದ್ದು, ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ, ಆಗಮಿಸಿದ ನಂತರ ಸಮ್ಮೇಳನದ ಸರ್ವಾಧ್ಯಕ್ಷಗೆ ಅಧಿಕೃತ ಆಹ್ವಾನ ನೀಡಲಾಗುವುದು ಎಂದರು.

ಸರ್ವಾಧ್ಯಕ್ಷರ ಪರಿಚಯ

ತಾಲೂಕಿನ ಮಲ್ಲಾಪುರದ ಲಿಂಗಾರೆಡ್ಡಿ ವಿ. ಆಲೂರು, ಎಂಎ ಕನ್ನಡ ಪದವೀಧರರಾಗಿದ್ದಾರೆ. ತಾಲೂಕಿನ ವಿವಿಧ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕ, ಉಪನ್ಯಾಸಕರಾಗಿ 33 ವರ್ಷಗಳ ಅನುಭವ ಹೊಂದಿದ್ದು, ಕೃಷಿಗೆ ಸಂಬಂಧಿಸಿದ ಹಲವು ಲೇಖನಗಳನ್ನು ಬರೆದಿದ್ದಾರೆ. ನನ್ನೊಳಗಿನ ಕತೆಗಳು ಕಥಾ ಸಂಕಲನ, ಅರವತ್ತು ಮನಸ್ಸು ಸಂಪಾದನಾ ಕೃತಿ ಪ್ರಕಟಣೆ ಹೊರತಂದಿದ್ದಾರೆ. ಹಲವು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದು, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕಥೆ, ಕವಿತೆಗಳು ಪ್ರಕಟಗೊಂಡಿವೆ. ಸ್ಪಷ್ಟ ಉಚ್ಛಾರಣೆಯ ನಿರೂಪಕರಾಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ನವಲಿಯಲ್ಲಿ ನಡೆದ ತಾಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಂಠದಾನ ಕಲಾವಿದ ಆಲೂರು, ದೂರದರ್ಶನದಲ್ಲಿ ಮೂಡಿದ ಬಂದ ಕೆರೆಗೆ ಹಾರ ಸೇರಿ ಹಲವು ನಾಟಕಗಳಲ್ಲಿ ನಟ ಮತ್ತು ಪ್ರಮುಖ ಗಾಯಕರಾಗಿ ಗುರುತಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net