

ಗಂಗಾವತಿ: ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮಕ್ಕೆ ಸಂಬಂಧಿಸಿ ಅಮೆರಿಕ-ಭಾರತ ಒಪ್ಪಂದ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಸಮಿತಿ ತಾಲೂಕು ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ದೇಶದಲ್ಲಿ 10 ಕೋಟಿ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿವೆ. 48 ದಶಲಕ್ಷ ಜನರಿಗೆ ಕುಕ್ಕುಟೋದ್ಯಮ ಜೀವನೋಪಾಯವಾಗಿದೆ. ಅಮೆರಿಕದೊಂದಿಗೆ ಈ ಒಪ್ಪಂದ ಮಾಡಿಕೊಂಡರೆ ಸ್ಥಳೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ.
ಇದರಿಂದ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮ ಅವಲಂಬಿತ ಕುಟುಂಬಗಳ ಬೀದಿಪಾಲಾಗುವ ಸಾಧ್ಯತೆಗಳಿವೆ. ಜಾಗತಿಕ ಹಣಕಾಸು ಪರಿಸ್ಥಿತಿ ಕುಸಿಯುತ್ತಿರುವ ಸಂದರ್ಭದಲ್ಲಿ ಇಂತಹ ಒಪ್ಪಂದಕ್ಕೆ ಮುಂದಾಗಿದ್ದು ಸರಿಯಲ್ಲ. ಅಮೆರಿಕ ಅಧ್ಯಕ್ಷರನ್ನು ಆಹ್ವಾನಿಸಿ ರೈತಪರ ಯೋಜನೆ ರೂಪಿಸಬೇಕಿದ್ದ ಕೇಂದ್ರ ಸರ್ಕಾರ ಅವೈಜ್ಞಾನಿಕ ಒಪ್ಪಂದಕ್ಕೆ ಮುಂದಾಗಿದ್ದು ದುರದೃಷ್ಟಕರ. ಒಪ್ಪಂದ ಕೈ ಬಿಡದಿದ್ದರೆ ಹೋರಾಟ ನಿರಂತರವಾಗಲಿದೆ ಎಂದರು.
ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ನಿರುಪಾದಿ ಬೆಣಕಲ್, ಮಂಜುನಾಥ ಡಗ್ಗಿ, ಗಂಗಪ್ಪ, ಲಿಂಗಪ್ಪ ಢಣಾಪುರ, ಶಂಕರ, ಕನಕರಾಯ, ಹುಲಿಗೆಮ್ಮ ದುರುಗಮ್ಮ ಇತರರು ಇದ್ದರು.