

ಗಂಗಾವತಿ: ಜಿಲ್ಲಾಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಮತ್ತು ಅರ್ಥಪೂರ್ಣ ಆಚರಿಸಲಾಗುತ್ತಿದ್ದು, ಮಾ.27 ಮತ್ತು 28ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಹೇಳಿದರು.
ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಲಾ ಮಕ್ಕಳ ವಾರ್ಷಿಕ ಪರೀಕ್ಷೆಗಳು ಪೂರ್ಣಗೊಳ್ಳುತ್ತಿದ್ದಂತೆ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ನಗರದ ಬಾಲಕರ ಪ.ಪೂ.ಕಾಲೇಜು (ಜ್ಯೂನಿಯರ್) ಮೈದಾನದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೊಢೀಕರಣ, ವೇದಿಕೆ ಸಿದ್ಧತೆ, ನಗರದ ಅಲಂಕಾರ, ಆಹ್ವಾನ ಪತ್ರಿಕೆ, ಊಟ, ಕಲಾವಿದರಿಗೆ ಆತಿಥ್ಯ ಸೇರಿ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದ್ದು, ಕಾಲಕಾಲಕ್ಕೆ ಸಭೆ ಆಯೋಜಿಸಿ ಪರಿಷತ್ ಸದಸ್ಯರ ಸಲಹೆ ಪಡೆಯಲಾಗುವುದು ಎಂದರು.
ಶಾಸಕರೊಂದಿಗೆ ಚರ್ಚೆ: ಕಸಾಪ ತಾಲೂಕು ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಬಳ್ಳಾರಿ ನಿವಾಸಕ್ಕೆ ತೆರಳಿ ಸಮ್ಮೇಳನ ಕುರಿತು ಚರ್ಚಿಸಿದರು. ಸಮ್ಮೇಳನಕ್ಕಾಗಿ ಶಿಕ್ಷಣ ಇಲಾಖೆ ನೌಕರರನ್ನು ಬಳಸಿಕೊಳ್ಳಬೇಕಿದ್ದರಿಂದ ಪರೀಕ್ಷೆ ಮುಗಿದ ನಂತರ ಆಯೋಜಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಸಮ್ಮೇಳನ ಅದ್ದೂರಿ ಮತ್ತು ಅರ್ಥಪೂರ್ಣ ಅಚರಣೆಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆ ನೀಡಿದ್ದು, ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್, ಪದಾಧಿಕಾರಿಗಳಾದ ಶಿವಾನಂದ ತಿಮ್ಮಾಪುರ, ರಮೇಶ ಕುಲ್ಕರ್ಣಿ, ಮುಖಂಡರಾದ ಮನೋಹರಗೌಡ ಹೇರೂರು, ಈಶ್ವರಯ್ಯ ನವಲಹಳ್ಳಿ ಇತರರಿದ್ದರು.