

ಗಂಗಾವತಿ: ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದ್ದು, ಸಂಘಟಿತವಾಗಿ ಹಕ್ಕುಗಳನ್ನು ಪಡೆದುಕೊಳ್ಳುವಂತೆ ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಶಿವಕುಮಾರ ಗೌಡ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 4ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರು ಮತ್ತು ಅವಲಂಬಿತರ ಹಿತದೃಷ್ಟಿಯಿಂದ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಸಮಸ್ಯೆ ಎದುರಾದರೂ, ಮಾಲೀಕರೊಂದಿಗೆ ವೈಮನಸ್ಸು ಮಾಡಿಕೊಳ್ಳದೇ ಕಾರ್ಮಿಕ ಇಲಾಖೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ದುಡಿಮೆ ಅವಧಿಯಲ್ಲಿ ಸುರಕ್ಷತಾ ಸಾಧನಾ ಬಳಸಲು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಮಾತನಾಡಿ, ಸಂಘದಲ್ಲಿ 450 ಕ್ಕೂ ಹೆಚ್ಚು ಕಾರ್ಮಿಕರ ಸದಸ್ಯತ್ವ ಪಡೆದಿದ್ದು, ಸಂಘಟನಾತ್ಮಕವಾಗಿ ಹಕ್ಕು ಪಡೆದುಕೊಳ್ಳುತ್ತಿದ್ದೇವೆ ಎಂದರು.
ಸಂಘದ ಕಾನೂನು ಸಲಹೆಗಾರ ಪ್ರಕಾಶ ಕುಸಬಿ ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಹನುಮಂತಪ್ಪ ಡಣಾಪುರ, ವಿರೇಶ, ಮಾರೇಶ, ಶ್ರೀನಿವಾಸ, ರಮೇಶ್, ರಹೀಂಸಾಬ್, ಸದ್ದಾಂಹುಸೇನ್, ವಿಜಯಕುಮಾರ, ಮಂಜುನಾಥ, ಗಾದಿಲಿಂಗಪ್ಪ, ಪ್ರಸಾದ್, ಪರಶುರಾಮ, ಚಂದ್ರು ಇತರರಿದ್ದರು.