

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಾಗಿ ಸ್ನಾತಕೋತ್ತರ ಕೇಂದ್ರ ಆರಂಭಿಸಿದ್ದು, ವಿದ್ಯಾರ್ಥಿಗಳು ಉನ್ನತ ಕನಸಿನೊಂದಿಗೆ ದೇಶದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಜಿಎಚ್‌ಎನ್ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ಪದವಿಯ ಮೊದಲ ತಂಡದ ನಿರ್ಗಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದೇ ಪ್ರಾಂಗಣದಲ್ಲಿ ನರ್ಸರಿಯಿಂದ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ಕಲ್ಪಿಸಿದ್ದು, ಈ ಭಾಗದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸುವುದರ ಜತೆಗೆ ಸಮಾಜದ ಆಸ್ತಿಯಾಗಲಿ ಎಂದರು.
ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿ, ಪದವೀಧರರು ಉದ್ಯೋಗ ಅನ್ವೇಷಕರಾಗದೇ, ಉದ್ಯೋಗ ಸೃಷ್ಟಿಸುವ ಕೌಶಲತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಜಾಗತೀಕರಣದ ವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಟಿಸುವ ಅವಕಾಶಗಳಿದ್ದು, ಜ್ಞಾನವನ್ನು ಬಳಸಿಕೊಂಡು ಉದ್ಯಮಪತಿಗಳಾಗುವಂತೆ ಸಲಹೆ ನೀಡಿದರು.
ಇದೇ ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಪಿಜಿವರಿಗೂ ಅಭ್ಯಸಿಸಿ ಉದ್ಯೋಗ ಪಡೆದ ರಕ್ಷಿತಾಳನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ಸದಸ್ಯರಾದ ಗುಂಜಳ್ಳಿ ತಿಪ್ಪೇಶ, ರಾಚಯ್ಯಸ್ವಾಮಿ, ಕೆಸಿಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ಜಿಎಚ್‌ಎನ್ ಕಾಲೇಜಿನ ಪ್ರಾಚಾರ್ಯ ಪ್ರೊ.ಜಿ.ಬಸವರಾಜ ಅಯೋಧ್ಯಾ, ಸ್ನಾತಕೋತ್ತರ ಕೇಂದ್ರದ ಸಂಯೋಜಕ ಎಸ್.ಕೆ.ಸೋಮನಗೌಡ, ಉಪನ್ಯಾಸಕಿ ಜಯಲಕ್ಮೀ, ವಿದ್ಯಾರ್ಥಿ ಪ್ರತಿನಿಧಿಗಳಾದ ಬಸವನಾಯಕ್, ಅನಿತಾ ಇತರರಿದ್ದರು.