

ಗಂಗಾವತಿ: ಜುಲಾಯಿನಗರ ಸಂಪರ್ಕ ರಸ್ತೆಯ ತ್ವರಿತ ದುರಸ್ತಿಗೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಜೇಷನ್ ತಾಲೂಕು ಸಮಿತಿ ಸದಸ್ಯರು ನಗರಸಭೆ ಮುಂದೆ ಹಜರತ್ ಬಿಲಾಲ್ ಮಸ್ಜೀದ್ ರಸ್ತೆ ಹೋರಾಟ ಸಮಿತಿ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯದಿಂದ ಜುಲಾಯಿನಗರ ಇಂದಿರಾಗಾಂಧಿ ವೃತ್ತದವರೆಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆ ಅಗೆದು ತಿಂಗಳಾದರೂ ದುರಸ್ತಿಯಾಗುತ್ತಿಲ್ಲ. ಉದ್ದೇಶಿತ ರಸ್ತೆಯಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗಿದ್ದು, ವಹಿವಾಟು ಸ್ಥಗಿತಗೊಂಡಿದೆ. ಇದು ಅತಿ ಹೆಚ್ಚು ಜನ ಸಂಚಾರದ ರಸ್ತೆಯಾಗಿದ್ದರಿಂದ ರಸ್ತೆ ಅಗೆದ ಪರಿಣಾಮ ಜನಜಂಗುಳಿ ಹೆಚ್ಚಾಗಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ. ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸದಿದ್ದರೆ ಜುಲಾಯಿನಗರದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ದುರಸ್ತಿ ಕಾಮಗಾರಿ ಕೆಐಆರ್‌ಡಿಎಲ್ ನಿರ್ವಹಣೆಯಲ್ಲಿದ್ದು, ಸಂಬಂಧಿತ ಇಂಜಿನಿಯರ್‌ಗಳ ಗಮನಕ್ಕೆ ತಂದು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಸಮಿತಿ ಪದಾಧಿಕಾರಿಗಳಾದ ಮೊಹ್ಮದ್ ಸಾದಿಕ್, ಮಕ್ಸೂದ್, ಜಾಫರ್ ಸಾದಿಕ್, ಮೌಲಹುಸೇನ್, ಯೂನೂಸ್, ಮಲ್ಲಣ್ಣ, ಮಹೇಶ, ಖಲೀಲ್, ಖಾಸೀಂ ಅಲಿ, ಇಮ್ರಾನ್, ರಾಜಾವಲಿ, ಜೆ.ಬಿ.ಬಾಷಾ, ಮುಬಾರಕ್, ತಾಹೀರ್ ಇತರರಿದ್ದರು.\