

ಗಂಗಾವತಿ: ತಾಲೂಕಿನ ಜಂಗಮರಕಲ್ಗುಡಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹರಿದು ಮೈಮೇಲೆ ಬಿದ್ದ ಪರಿಣಾಮ ಖಾಸಗಿ ಶಾಲೆ ಶಿಕ್ಷಕಿ ಹರಿತಾ ಶ್ರೀನಿವಾಸ (26) ಗುರುವಾರ ಮೃತಪಟ್ಟಿದ್ದಾರೆ.
ಮನೆಯಿಂದ ವಿದ್ಯಾನಗರದ ಗೊಟ್ಟಿಪಾಟಿ ಶಿಕ್ಷಣ ಸಂಸ್ಥೆಯ ಶಾಲೆಗೆ ಹೋಗಲು ಮಾವ ಪೂರ್ಣಚಂದ್ರರಾವ್ ಜತೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ, ವಿದ್ಯುತ್ ತಂತಿ ಹರಿದು ಬಿದ್ದಿದೆ. ಮೈ ಮೇಲೆ ಬಿದ್ದ ತಂತಿಯನ್ನು ಕೈಯಿಂದ ಬಿಡಿಸಿಕೊಳ್ಳಲೆತ್ನಿಸಿದಾಗ ಸ್ಕೂಟಿಯಿಂದ ಬಿದ್ದಿದ್ದು, ವಿದ್ಯುತ್ ಪ್ರವಹಿಸಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪತಿ, ಪುತ್ರ ಮತ್ತು ಅವಳಿ ಪುತ್ರಿಯರಿದ್ದು, ಕುಟುಂಬ ಸದಸ್ಯರ ಅಕ್ರಂದನ ಮುಗಿಲುಮುಟ್ಟಿತ್ತು. ಗ್ರಾಮೀಣಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.