

ಗಂಗಾವತಿ: ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತ ಮಹಿಳೆಯರು ಸ್ವಾವಲಂಭಿಯಾಗಬೇಕಿದ್ದು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಎಂದು ಗ್ರಾಪಂ ಮಾಜಿ ಸದಸ್ಯ ಮಹಾದೇವಪ್ಪ ಮೋಟ ಹೇಳಿದರು.
ತಾಲೂಕಿನ ಹೊಸಳ್ಳಿಯ ಶ್ರೀ ಗಂಗಾಪರಮೇಶ್ವರಿ ದೇವಾಲಯದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಶ್ವೇತಾ ಮಾತನಾಡಿ, ಗೃಹ ಕೈಗಾರಿಕೆ ಮೂಲಕ ಸ್ವ-ಉದ್ಯೋಗ ಸೃಷ್ಟಿಸಿಕೊಳ್ಳಲು ಅವಕಾಶವಿದ್ದು, ಮಹಿಳೆಯರು ಕೌಶಲ ಅಳವಡಿಸಿಕೊಂಡರೆ ಉದ್ಯೋಗದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಶಿಬಿರದಲ್ಲಿ ಸ್ವ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಭನೆ ಕುರಿತು ಮಾಹಿತಿ ನೀಡಲಾಯಿತು.
ಟ್ರಸ್ಟ್ ತಾಲೂಕು ವಿಕ್ಷಣಾಧಿಕಾರಿ ವಿರೂಪಾಕ್ಷ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾ, ಮೇಲ್ವಿಚಾರಕಿ ನಾಗಮಣಿ, ಸೇವಾ ಪ್ರತಿನಿಧಿ ಮಮತಾ, ಒಕ್ಕೂಟದ ಅಧ್ಯಕ್ಷೆ ಈರಮ್ಮ, ಪ್ರಮುಖ ಮಹಾದೇವಪ್ಪ ಇತರರಿದ್ದರು.