

ಗಂಗಾವತಿ: ಅಕ್ಷರ ಮತ್ತು ಆಟಗಳನ್ನು ಸಮಾನ ರೀತಿಯಲ್ಲಿ ಕಲಿಯಬೇಕಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎರಡು ಕಲಿಕೆ ಪೂರವಾಗಿವೆ ಎಂದು ಡಿಡಿಪಿಐ ಸೋಮಶೇಖರ್‌ಗೌಡ ಪಾಟೀಲ್ ಹೇಳಿದರು.
ನಗರದ ಲಯನ್ಸ್ ಸಮೂಹ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಲಯನ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಅಕ್ಷರ ಕಲಿಕೆಗೆ ಮಾತ್ರ ಅವಕಾಶವಿದ್ದು, ಆಟೋಟಗಳು ಮೈದಾನಕ್ಕೆ ಸೀಮಿತವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಆಟಕ್ಕಾಗಿ ಪ್ರತ್ಯೇಕ ವಿಷಯವಿದ್ದು, ಬೋಧನಾ ವ್ಯವಸ್ಥೆಯಿದೆ. ಆಟ ಮತ್ತು ಅಕ್ಷರ ಕಲಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕಾಣಬಹುದಾಗಿದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೀಗಾಗಿ ಮಕ್ಕಳು ಅಕ್ಷರ ಕಲಿಕೆ ಜತೆಗೆ ಆಟೋಟಕ್ಕೂ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಗುಂಪು ಆಟಗಳಲ್ಲಿ ರಾಜ್ಯಮಟ್ಟ ಪ್ರವೇಶಿಸಿದ್ದು, ರಾಷ್ಟ್ರಮಟ್ಟದಲ್ಲೂ ಅರ್ಹತೆ ಪಡೆಯುವ ವಿಶ್ವಾಸವಿದೆ. ಸೋಲು, ಗೆಲುವಿನತ್ತ ಗಮನಹರಿಸದೇ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಎಂದರು.
ಮೂರು ದಿನದ ಕ್ರೀಡಾ ಕೂಟದಲ್ಲಿ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನ 8 ವಲಯದಿಂದ ವೈಯುಕ್ತಿಕ ಮತ್ತು ಗುಂಪು ಆಟಗಳಲ್ಲಿ 600ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದ್ದಾರೆ.
ಬಿಇಒ ಎಚ್.ಬಿ.ನಟೇಶ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ರಮೇಶ ಚೌಡ್ಕಿ, ಮಾಜಿ ಸದಸ್ಯ ಮನೋಹರಗೌಡ ಹೇರೂರು, ಟ್ರಸ್ಟ್ ಅಧ್ಯಕ್ಷ ಡಾ.ಜಿ.ಚಂದ್ರಪ್ಪ, ಕ್ಲಬ್ ಅಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್, ಆಡಳಿತಾಧಿಕಾರಿ ಪ್ರೊ.ಚಂದ್ರೇಗೌಡ ಪೊ.ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ವಕೀಲ ಮಲ್ಲಪ್ಪ ಬೆಂಚಮಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಯಂಕಪ್ಪ ತಳವಾರ, ಪದಾಧಿಕಾರಿಗಳಾದ ಶಿವಕಾಂತ ತಳವಾರ, ಹನುಮಂತಪ್ಪ, ಮುಖ್ಯಶಿಕ್ಷಕರಾದ ಎಂ.ಜಗನ್ನಾಥದಾಸ್, ಗುರುಪಾದಯ್ಯ ಹಿರೇಮಠ ಇತರರಿದ್ದರು.