ಸೇವಾ ಭದ್ರತೆ ಕಲ್ಪಿಸಿ; ಅತಿಥಿ ಉಪನ್ಯಾಸಕರ ಆಗ್ರಹ

15122021 Gangavathi Guest lecturers protest
Published on

ಗಂಗಾವತಿ ತಹಸೀಲ್ದಾರ್‌ಗೆ ಮನವಿ

ಗಂಗಾವತಿ: ಸೇವಾಭದ್ರತೆ ಮತ್ತು ವೇತನ ಹೆಚ್ಚಳ ಸೇರಿದಂತೆ ಇತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಘಟಕದ ಸದಸ್ಯರು ನಗರದ ಮಿನಿ ವಿಧಾನಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಿಂದ ರ‌್ಯಾಲಿ ಮೂಲಕ ತೆರಳಿದರು. ಸಂಘದ ಜಿಲ್ಲಾಧ್ಯಕ್ಷ ಎ.ಕೆ.ಮಹೇಶಕುಮಾರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉಪನ್ಯಾಸಕರಿಗೆ ಸೇವಾ ಭದ್ರತೆಯಿಲ್ಲದಂತಾಗಿದೆ. ಭರವಸೆ ನೀಡುವ ಎಲ್ಲ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ನಿರ್ಲಕ್ಷಿಸುತ್ತಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಉಪನ್ಯಾಸಕರ ವೇತನ ಹೆಚ್ಚಳಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸೇವಾಭದ್ರತೆ ಒದಗಿಸುವಲ್ಲಿ ವಿಲವಾದ ಸರ್ಕಾರ, ಅಧಿವೇಶನ ಸಂದರ್ಭದಲ್ಲಿ ವೇತನ ಬಿಡುಗಡೆ ಮಾಡಿದೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಉನ್ನತ ಶಿಕ್ಷಣ ಇಲಾಖೆ ಕೈಗೊಳ್ಳುತ್ತಿರುವುದು ದುರದೃಷ್ಟಕರ. ಬೆಳಗಾವಿ ಅಧಿವೇಶನದಲ್ಲಿ ಸೇವಾ ಭದ್ರತೆ ಕಲ್ಪಿಸುವ ಮಸೂದೆ ಅಂಗೀಕರಿಸುವಂತೆ ಒತ್ತಾಯಿಸಿದರು. ತಹಸೀಲ್ದಾರ್ ಯು.ನಾಗರಾಜಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಪಂಚಾಕ್ಷರಯ್ಯ, ಪದಾಧಿಕಾರಿಗಳಾದ ಪವನಕುಮಾರ ಗುಂಡೂರು, ಪಾಂಡುರಂಗ ಅಗ್ನಿಹೋತ್ರಿ, ಲಕ್ಷ್ಮೀದೇವಿ, ರೇಣುಕಾ, ಶಿವಕುಮಾರ ಉಪಾಸಿ, ಎಚ್.ಸತೀಶ್, ಎಂ.ತಾಯಪ್ಪ, ವಿಜಯಮಹಾಂತೇಶ, ರಾಘವೇಂದ್ರ, ಸೋಮಶೇಖರ್ ಜೇಕಿನ್, ಕೆ.ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net