

ಗಂಗಾವತಿ: ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಆರಂಭಿಸುವುದರ ಜತೆಗೆ ಸ್ವಚ್ಛತೆಯತ್ತ ಗಮನಹರಿಸಬೇಕಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರ ಕಲ್ಪಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಾ.ಕೆ.ವೆಂಕಟೇಶಬಾಬು ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಯೋಜನೆಗಳ ಪ್ರಚಾರಕ್ಕಾಗಿ ಎಲ್‌ಇಡಿ ಬಳಸಿಕೊಳ್ಳಬೇಕಿದ್ದು, ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಕಳ್ಳರು, ಮಾದಕ ವ್ಯಸನಿಗಳ ಕಾಟ ಹೆಚ್ಚುತ್ತಿದ್ದು, ಅಧಿಕಾರಿಗಳು ನಿಗಾವಹಿಸುವಂತೆ ಸೂಚನೆ ನೀಡಿದರು.
ಘಟಕ ವ್ಯವಸ್ಥಾಪಕ ರಾಜಶೇಖರ್ ಮಾತನಾಡಿ, ಪೊಲೀಸ್ ಚೌಕಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಬ್ಬಂದಿ ಕೊರತೆಯಿಂದ ಹೆಚ್ಚುವರಿ ಸಂಚಾರದ ವ್ಯವಸ್ಥೆಯಾಗಿಲ್ಲ.
ಶಕ್ತಿ ಯೋಜನೆಯಡಿ ಜೂನ್‌ನಲ್ಲಿ 6,64,762 ಪ್ರಯಾಣಿಕರು ಲಾಭ ಪಡೆದಿದ್ದು, ರಾತ್ರಿ ಸಮಯದಲ್ಲೂ ಮಹಿಳಾ ಶೌಚಗೃಹ ತೆರೆಯಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ವಿಳಂಬ: ಗೃಹಲಕ್ಷ್ಮಿ ಯೋಜನೆಯಡಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ 56,084 ಲಾನುಭವಿಗಳಿದ್ದು, ಅರ್ಜಿ ಸಲ್ಲಿಸಿದ 39ಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಯೋಜನೆ ತಲುಪಿಲ್ಲ ಎಂದು ಸಿಡಿಪಿಒ ಜಯಶ್ರೀ ರಾಜಪುರೋಹಿತ್ ಮಾಹಿತಿ ನೀಡಿದರು.
ಕಳೆದೆರಡು ತಿಂಗಳಿಂದ ಯೋಜನೆ ಹಣ ಬಂದಿಲ್ಲ, ಅರ್ಜಿ ಸಲ್ಲಿಸಿದ ಕೆಲವರಿಗೆ ಆರಂಭದಿಂದಲೂ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ಪರಿಶೀಲಿಸುವಂತೆ ಸಮಿತಿ ಸದಸ್ಯರು ತಿಳಿಸಿದರು.
ಅನುದಾನ ಕೊರತೆಯಿಂದ ವಿಳಂಬವಾಗಿದ್ದು, ಶೀಘ್ರವೇ ಇತ್ಯರ್ಥಗೊಳ್ಳಲಿದೆ ಎಂದು ಅಧ್ಯಕ್ಷ ಡಾ.ಕೆ.ವೆಂಕಟೇಶ ಬಾಬು ತಿಳಿಸಿದರು. ಯೋಜನೆ ಹಣವನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡ ಲಾನುಭವಿಗಳ ಅಭಿಪ್ರಾಯವನ್ನು ದಾಖಲೀಕರಿಸುವಂತೆ ಸಿಡಿಪಿಒಗೆ ಸದಸ್ಯರು ಸೂಚಿಸಿದರು.
ಸರ್ವರ್ ಸಮಸ್ಯೆ: ರಾಜ್ಯಮಟ್ಟದಲ್ಲಿ ಸರ್ವರ್ ಸಮಸ್ಯೆಯಿಂದ ಕೆಲ ಪಡಿತರ ಚೀಟಿಗಳು ಸಕ್ರಮವಾಗುತ್ತಿಲ್ಲ, ಹೊಸ ಅರ್ಜಿಗಳು ಸ್ವೀಕೃತವಾಗುತ್ತಿಲ್ಲ ಎಂದು ಆಹಾರ ನಿರೀಕ್ಷಕ ಸುಹಾಸ್ ಮಾಹಿತಿ ನೀಡಿದರು.
ತಾಲೂಕಿನಲ್ಲಿ 68 ನ್ಯಾಯಬೆಲೆ ಅಂಗಡಿಗಳಿದ್ದು, 1,98,620 ಪಡಿತರದಾರರ ಕೆವೈಸಿ ಮಾಡಲಾಗಿದೆ. ಸರಾಸರಿ ಶೇ.96.98 ಸಾಧನೆಯಾಗಿದ್ದು, ಜೂನ್‌ನಲ್ಲಿ ಪೂರ್ಣ ಪ್ರಮಾಣ ಪಡಿತರ ವಿತರಿಸಲಾಗಿದೆ. ಆರೋಗ್ಯ ವಿಮೆಗಾಗಿ ತಾತ್ಕಾಲಿಕ ಪಡಿತರ ಚೀಟಿ ನೀಡುವ ವ್ಯವಸ್ಥೆಯಿದ್ದು, ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಪಡಿತರ ಕಾಳಸಂತೆಯಲ್ಲಿ ಮಾರಾಟ ಸೇರಿ ವಿವಿಧ ವಿಷಯಗಳ ಕುರಿತು ಸದಸ್ಯರು ಅಭಿಪ್ರಾಯ ಹಂಚಿಕೊಂಡರು. ಸಭೆಯಲ್ಲಿ ಗೃಹಜ್ಯೋತಿ, ಯುವನಿಧಿ ಲಾನುಭವಿಗಳ ಕುರಿತು ಚರ್ಚಿಸಲಾಯಿತು. ಯೋಜನೆ ಸಮರ್ಪಕ ಅನುಷ್ಠಾನದ ಜತೆಗೆ ಬಳಕೆ ಕುರಿತು ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ತಾಲೂಕು ಸಮಿತಿ ಸದಸ್ಯರಾದ ಪರಶುರಾಮ್ ಕಿರಿಕಿರಿ, ಮುಸ್ತಾಕ್, ಹಮೀದ್ ಮುಲ್ಲಾ, ಗಡ್ಡಿ ನಾಗಮ್ಮ ಇತರರಿದ್ದರು.