

ಗಂಗಾವತಿ: ಗ್ರಾಪಂ ಚುನಾವಣಾಧಿಕಾರಿಗಳು ಬಿಜೆಪಿ ಪರ ನಿಲುವು ತಾಳಿದ್ದು, ಕೂಡಲೇ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಗರದ ಮಿನಿವಿಧಾನಸೌಧದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಹಿಂದುಳಿದ ಬಿ ವರ್ಗದಿಂದ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಸ್ಪರ್ಧಿದಿಸಿದ್ದ ವಿ.ಪ್ರಸಾದ ನಾಮಪತ್ರ ತಿರಸ್ಕೃತಗೊಳಿಸಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟಿಸಿದರು. ಸಮಜಾಯಿಷಿ ನೀಡಲು ಬಂದ ಚುನಾವಣೆ ನೋಡಲ್ ಅಧಿಕಾರಿ ಡಾ.ನಾಗರಾಜ್ ಮತ್ತು ತಹಸೀಲ್ದಾರ್ ಎಂ.ರೇಣುಕಾರನ್ನು ತರಾಟೆಗೆ ತೆಗೆದುಕೊಂಡರು.
ಮುಖಂಡ ಶೇಖರಯ್ಯಸ್ವಾಮಿ ಮಾತನಾಡಿ, ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿ. ಪ್ರಸಾದ ನಾಮಪತ್ರ ತಿರಸ್ಕೃತಗೊಳಿಸಿದ ಚುನಾವಣೆ ಅಧಿಕಾರಿಗಳು ಕೇಸರಹಟ್ಟಿ ಗ್ರಾಪಂ ವ್ಯಾಪ್ತಿಯ ಮರಕುಂಬಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿವೃತ್ತ ಬ್ಯಾಂಕ್ ಉದ್ಯೋಗಿ ಜಗದೀಶಪ್ಪ ಅಂಗಡಿ ಹೆಚ್ಚಿನ ಆಸ್ತಿ ಹೊಂದಿದ್ದರೂ ನಾಮಪತ್ರ ಸ್ವೀಕೃತಗೊಳಿಸಿದ್ದಾರೆ. ಶಾಸಕ ಬಸವರಾಜ ದಢೇಸುಗೂರು ಸೂಚನೆಯಂತೆ ಚುನಾವಣೆ ಅಧಿಕಾರಿಗಳು ಅಧಿಕಾರ ಚಲಾಯಿಸುತ್ತಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇಬ್ಬರ ನಾಮಪತ್ರ ತಿರಸ್ಕೃತಗೊಳಿಸಿ ಇಲ್ಲವೇ ಇಬ್ಬರಿಗೂ ಸ್ಪರ್ಧಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಚುನಾವಣೆ ಮಾರ್ಗಸೂಚಿಯಂತೆ ನಾಮಪತ್ರ ಪರಿಶೀಲಿಸಿದ್ದು, ಯಾರ ಪರವಾಗಿ ಅಲ್ಲ. ಬೇಕಾದರೆ ಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ತಿಳಿಸಿದರು. ಕಾಂಗ್ರೆಸ್ ಬೆಂಬಲಿಗರಾದ ವಿ.ಪ್ರಸಾದ, ನಾಗರಾಜ್, ವೆಂಕಟರೆಡ್ಡಿ, ಮಂಜುನಾಥ ಭೋವಿ, ಶರಣಪ್ಪ, ಯಮನೂರಪ್ಪ ನಾಯಕ, ಚನ್ನವೀರಯ್ಯಸ್ವಾಮಿ ಇತರರಿದ್ದರು.