

ಗಂಗಾವತಿ: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬೃಹತ್ ಉದ್ಯೋಗ ಮೇಳವನ್ನು ನಗರದ ಜಿಎಚ್‌ಎನ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏ.17ರಂದು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಯ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಜಿಎಚ್‌ಎನ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳದ ಕುರಿತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಕಾಲೇಜು ಆಡಳಿತ ಮಂಡಳಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಿಂದ ಹಲವು ವಿದ್ಯಾ ಸಂಸ್ಥೆಗಳು ನಡೆಯುತ್ತಿವೆ. ಕೆಜಿಯಿಂದ ಪಿಜಿವರಿಗೂ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಜಿಎಚ್‌ಎನ್ ವಾಣಿಜ್ಯ ಪದವಿ ಕಾಲೇಜು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಕೆಸಿಎಸ್ ಮಹಿಳಾ ಪದವಿ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಸ್ಥಳದಲ್ಲಿ ಸಂದರ್ಶನ ನಡೆಸುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ. 18 ವರ್ಷದಿಂದ 35 ವರ್ಷದೊಳಗಿನವರು ಭಾಗವಹಿಸಲು ಅವಕಾಶವಿದೆ. ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಪದವಿಧರರು ಮತ್ತು ಕಂಪ್ಯೂಟರ್ ತರಬೇತಿ ಹೊಂದಿದವರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಬೆಳಗ್ಗೆ 10 ರಿಂದ ಸಂಜೆ 4ರವರಿಗೂ ಮೇಳ ನಡೆಯಲಿದ್ದು, ಭಾಗವಹಿಸುವ ಅಕಾಂಕ್ಷಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮೇಳದ ಉದ್ದೇಶ, ವ್ಯವಸ್ಥೆ ಮತ್ತು ನಿರುದ್ಯೋಗ ಸಮಸ್ಯೆ ಕುರಿತು ಜಿಎಚ್‌ಎನ್ ವಾಣಿಜ್ಯ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಬಸವರಾಜ ಅಯೋಧ್ಯಾ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಸಿಂಗನಾಳ ಸುರೇಶ, ಎಚ್.ಎಂ. ಮಂಜುನಾಥ, ಲಿಂಗಪ್ಪ ಕಮತಗಿ, ಉದ್ಯೋಗ ವಿನಿಮಯ ಕೇಂದ್ರದ ಪ್ರತಿನಿಧಿ ವೆಂಕಟೇಶ ಇತರರಿದ್ದರು.