

ಗಂಗಾವತಿ: ಕರೊನಾ ಸೋಂಕಿನ ಗಂಭೀರತೆಗೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿಲ್ಲ. ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದರು.
ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶನಿವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಭೆ, ಸಮಾರಂಭಗಳ ರದ್ದತಿಗೆ ಆದೇಶಿಸಿದ್ದರೂ ಕಾರ್ಯಕ್ರಮಗಳ ಆಯೋಜನೆ ಮೂಲಕ ಜನರು ಸೇರಲು ಅವಕಾಶ ನೀಡಲಾಗುತ್ತಿದೆ. ಲಸಿಕೆ ಹಾಕುತ್ತಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಬಿಜೆಪಿಗೆ ಆಡಳಿತ ನಡೆಸಲು ಬರುವುದಿಲ್ಲ ಎಂದು ಹೇಳಿದರು.
ಬಿಜೆಪಿ ದುರಾಡಳಿತದಿಂದ ಜನರು ರೋಸಿದ್ದಾರೆ. ಉಪ ಚುನಾವಣೆಯಲ್ಲಿ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ ಎಂದು ಧ್ರವನಾರಾಯಣ ತಿಳಿಸಿದರು. ನಗರದ ಕಾಂಗ್ರೆಸ್ ಕಾರ್ಯಕರ್ತರ ನಿವಾಸಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜು ನಾಯಕ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ನಂದಾಪುರ ನಾಗರಾಜ್, ಐಲಿ ಬಸವರಾಜ, ಮಲ್ಲಿಕಾರ್ಜುನ, ವೆಂಕಟೇಶ, ಹುಸೇನಪ್ಪ ಹಂಚಿನಾಳ್, ಶರಣೇಗೌಡ ಇತರರಿದ್ದರು.