

ಗಂಗಾವತಿ: ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ವಿರೂಪಗೊಳಿಸಲೆತ್ನಿಸಬಾರದು ಎಂದು ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಶಾರದಾ ಪಾಟೀಲ್ ಸಲಹೆ ನೀಡಿದರು.
ನಗರದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.
ಪರಂಪರೆ ಮತ್ತು ಇತಿಹಾಸ ಪ್ರತಿಬಿಂಬಿಸುವ ಸ್ಮಾರಕಗಳು ಮತ್ತು ವಾಸ್ತುಶಿಲ್ಪಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ನಿರ್ಮಿಸಿದವರ ಹೆಸರೇ ಸ್ಮಾರಕಗಳಲ್ಲಿರಲ್ಲ, ಆದರೆ ಅಂತಹ ಸ್ಮಾರಕಗಳ ಮೇಲೆ ಏನೆಲ್ಲ ಬರೆಯುವ ಮೂಲಕ ವಿರೂಪಗೊಳಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಯುವ ಸಮುದಾಯ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಸಾಹಿತಿ ಲಿಂಗಾರೆಡ್ಡಿ ವಿ.ಆಲೂರು ಮಾತನಾಡಿ, ಈ ಭಾಗದ ಇತಿಹಾಸವನ್ನು ಸ್ಥಳೀಯ ಸಂಶೋಧಕರು ಪರಿಚಯಿಸುವ ಮೂಲಕ ಯುವ ಪೀಳಿಗೆಗೆ ಮಾಹಿತಿ ನೀಡಿದ್ದಾರೆ. ಪ್ರತಿಯೊಂದು ಸ್ಮಾರಕಗಳು ಒಂದೊಂದು ಇತಿಹಾಸ ಹೇಳುತ್ತಿದ್ದು, ಸಂರಕ್ಷಣೆಯತ್ತ ಗಮನಹರಿಸಿ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಐತಿಹಾಸಿಕ ಪರಂಪರೆ ಉಳಿಸಿ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುರೇಶ, ಡಾ.ವಾಣಿಶ್ರೀ ಪಾಟೀಲ್, ವಿದ್ಯಾರ್ಥಿ ಪ್ರತಿನಿಧಿಗಳಿದ್ದರು.