

ಅನಿಷ್ಟ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸಲು ಬೀದಿ ನಾಟಕ
ಗಂಗಾವತಿ: ಅನಿಷ್ಟ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನ ಏರ್ಪಡಿಸಿದ್ದು, ಇಲಾಖೆ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಸಿಡಿಪಿಒ ಗಂಗಪ್ಪ ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭಾನುವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅರಿವು ಜಾಗೃತಿ ಅಭಿಯಾನದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಾಲ್ಯ ವಿವಾಹ, ಬಾಲಕಾರ್ಮಿಕ, ದೇವದಾಸಿ ಪದ್ಧತಿ ನಿರ್ಮೂಲನೆಗೆ ಇಲಾಖೆ ಹಲವು ಯೋಜನೆ ಜಾರಿಗೆ ತಂದಿದೆ. ಅನಿಷ್ಟ ಪದ್ಧತಿ ದೂರ ಮಾಡಿ ಗುಣಮಟ್ಟದ ಶಿಕ್ಷಣದ ಮೂಲಕ ಭವಿಷ್ಯತ್ವದ ಪ್ರಜೆಗಳನ್ನಾಗಿ ರೂಪಿಸಲಾಗುವುದು. ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕದ ಪ್ರಚಾರ ಮಾಧ್ಯಮ ಬಳಸಿಕೊಳ್ಳಲಾಗಿದೆ ಎಂದರು.
ಅಭಿಯಾನದ ಬೇಟಿ ಬಚಾವೋ, ಬೇಟಿ ಪಢಾವೋ, ಮಾತೃಶ್ರೀ, ಮಾತೃವಂದನಾ, ಪೋಷಣಾ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಮಾಹಿತಿ ನೀಡಲಾಯಿತು. ಎನ್‌ಇಕೆಎಸ್‌ಆರ್‌ಟಿಸಿ ಘಟಕ ನಿಯಂತ್ರಕ ರಾಮನಗೌಡ, ಮೇಲ್ವಿಚಾರಕಿಯರಾದ ವಿದ್ಯಾವತಿ, ಸುಜಾತಾ ಹಾವನೂರು, ಶಾಹೀನ್ ಬೇಗಂ, ಕಲಾವಿದರಾದ ಮಂಜುನಾಥ, ಅಕ್ಕಮಹಾದೇವಿ ಇತರರಿದ್ದರು.