

ಗಂಗಾವತಿ: ಕನ್ನಡದ ಹಿರಿಯ ಚಿತ್ರನಟರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವ ನಟ ಮಡೆನೂರು ಮನು ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕಡಾ.ಶಿವರಾಜಕುಮಾರ ಮತ್ತು ಪುನೀತ್‌ರಾಜಕುಮಾರ ಅಭಿಮಾನಿಗಳ ಬಳಗದ ಸದಸ್ಯರು ನಗರದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಿದರು.
ನಗರ ಘಟಕದ ಅಭಿಮಾನಿಗಳೊಂದಿಗೆ ಡಿವೈಎಸ್ಪಿ ಕಚೇರಿಗೆ ತೆರಳಿದ ಸದಸ್ಯರು, ಮನವಿಯನ್ನು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಅವರಿಗೆ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಖಾದರ್‌ಬಾಷಾ ಮಾತನಾಡಿ, ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಖ್ಯಾತಿ ನಟ ಶಿವರಾಜಕುಮಾರ ಬಗ್ಗೆ ಮಡೆನೂರ್ ಮನು ಹಗುರವಾಗಿ ಮಾತನಾಡಿದ್ದಲ್ಲದೇ, ನಿರ್ಲಕ್ಷ್ಯದಿಂದ ವರ್ತಿಸಿದ್ದಾನೆ. ಅದರಂತೆ ನಟ ಧ್ರುವ ಸರ್ಜಾ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ. ಚಿತ್ರರಂಗದ ಸ್ವಾಸ್ಥ್ಯ ಕದಡಲೆತ್ನಿಸುತ್ತಿರುವ ಮಡೆನೂರ್ ಮನು ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ವಕೀಲ ಇಮ್ರಾನ್, ಅಭಿಮಾನಿ ಬಳಗದ ಸದಸ್ಯರಾದ ಸಮೀರ್, ಪುನೀತ್, ಸಲ್ಮಾನ್, ಹುಸೇನ್ ಇತರರಿದ್ದರು.