

ಗಂಗಾವತಿ: ತುಂಗಭದ್ರಾ ಜಲಾಶಯ ಮತ್ತು ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಅಡ್ಡಿಯಾದ ತುಂಗಭದ್ರಾ ಮಂಡಳಿ ರದ್ದು ಮಾಡಲು ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಒತ್ತಾಯಿಸಲಾಗುವುದು ಎಂದು ಕಾಡಾ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಹೇಳಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಎಚ್‌ಆರ್‌ಜಿ ನಿವಾಸದಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಭಾನುವಾರ ಮಾತನಾಡಿದರು. ಮಂಡಳಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಪ್ರಕರಣ ಹೆಚ್ಚುತ್ತಿದ್ದು, ನಿರ್ವಹಣೆಗೆ ನಿಗದಿಪಡಿಸಿರುವ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ. ಮಂಡಳಿ ರದ್ದತಿಯಿಂದ ಜಲಾಶಯದ ಕಾಯಕಲ್ಪ ಸಾಧ್ಯವಿದ್ದು, ಈ ಬಗ್ಗೆ ಡಿಸಿಎಂಗೆ ರೈತ ನಿಯೋಗದ ಮೂಲಕ ಮನವರಿಕೆ ಮಾಡಲಾಗುವುದು. ತ್ರಿವಳಿ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ಬಗ್ಗೆ ಅಸಡ್ಡೆ ಸರಿಯಲ್ಲ. ನೀರನ್ನೇ ನಂಬಿರುವ ರೈತರಿಗೆ ಅನ್ಯಾಯವಾಗುತ್ತಿದೆ. ನೀರು ಬಳಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಪ್ರಾಧಿಕಾರ ರಚಿಸಲಿ: ವಿಜಯನಗರ ಆಡಳಿತ ಅವಧಿಯಿಂದಲೂ ಚಾಲ್ತಿಯಲ್ಲಿರುವ ವಿಎನ್‌ಸಿ, ರಾಯ, ಬಸವ ಕಾಲುವೆಗಳಿಗೆ 12 ತಿಂಗಳು ನೀರು ಹರಿಸಬೇಕಿದೆ. ಉದ್ದೇಶಿತ ಕಾಲುವೆಗಳನ್ನು ಮಂಡಳಿಯಿಂದ ಬೇರ್ಪಡಿಸಬೇಕಿದ್ದು, ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕಿದೆ. 20 ವರ್ಷಗಳ ಹಿಂದೆ ಸಮಾನಾಂತರ ಜಲಾಶಯ ಮತ್ತು ಸಮಾನಾಂತರ ಕಾಲುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಯಾವುದೇ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತೆಲಂಗಾಣ ಮತ್ತು ಆಂಧ್ರ ಸರ್ಕಾರದೊಂದಿಗೆ ಡಿಸಿಎಂ ಸಮನ್ವಯತೆ ಸಾಧಿಸುವ ಮೂಲಕ ಯೋಜನೆ ಪೂರ್ಣಗೊಳಿಸಲು ಗಮನಹರಿಸಬೇಕಿದೆ. ಯೋಜನೆಗಳು ಡಿಪಿಆರ್‌ಗೆ ಸೀಮಿತವಾಗದೆ, ಕಾಮಗಾರಿ ಆರಂಭಿಸಬೇಕಿದೆ ಎಂದರು.
ಮುಖಂಡರಾದ ಮುಕುಂದರಾವ್ ಭವಾನಿಮಠ, ರಾಜಶೇಖರ್ ಮುಷ್ಟೂರು, ಹನುಮಂತರಾಯ, ಸುರೇಶ ಗೌರಪ್ಪ, ಆಯೂಬ್, ನಾಜನೀನ್ ಇತರರಿದ್ದರು.
ಮುಖ್ಯ ಕಾಲುವೆಗಳ ನಿರ್ವಹಣೆಗೆ ಕೋಟ್ಯಂತರ ರೂ. ಅನುದಾನ ಪ್ರತಿ ವರ್ಷ ಬಳಸುತ್ತಿದ್ದರೂ, ಶಾಶ್ವತ ದುರಸ್ತಿಯಾಗುತ್ತಿಲ್ಲ. ಕಾಲುವೆಗಳ ಅಭಿವೃದ್ಧಿಗೆ ೈಬರ್ ಕೋಟ್ ಬಳಕೆ ಕುರಿತು ಹಲವು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ಉಳಿಸಲು ಮತ್ತು ರೈತರ ಹಿತಕ್ಕಾಗಿ ಮುಖ್ಯಕಾಲುವೆಗಳಿಗೆ ೈಬರ್ ಕೋಟ್ ಕಾಮಗಾರಿ ಅಗತ್ಯವಿದೆ. ಈ ಬಗ್ಗೆ ಮತ್ತೊಮ್ಮೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ನೀರು ಬಳಕೆ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಶಾಶ್ವತ ದುರಸ್ತಿ ಬೇಕಿಲ್ಲ. ನಿರ್ವಹಣೆ ಮತ್ತು ದುರಸ್ತಿ ನೆಪದಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಹೆಚ್ಚು ಆಸಕ್ತಿವಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸೇರಿ ಇತರ ಶಾಸಕರು ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಎಪ್ಪತ್ತು ವರ್ಷ ಪೂರೈಸಿರುವ ತುಂಗಭದ್ರಾ ಜಲಾಶಯ ಗಟ್ಟಿಯಾಗಿದ್ದು, ನಿರ್ವಹಣೆ ಕೊರತೆಯಿಂದ ದುರಸ್ತಿ ಸಮಸ್ಯೆ ಹೆಚ್ಚಾಗುತ್ತಿದೆ. ಜಲಾಶಯ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಆಸಕ್ತಿವಹಿಸಬೇಕಿದೆ.| ಎಚ್.ಆರ್.ಶ್ರೀನಾಥ ಮಾಜಿ ಅಧ್ಯಕ್ಷ ಕಾಡಾ