

ಗಂಗಾವತಿ: ಕೃಷಿಕೂಲಿಕಾರರರನ್ನ ಕಡೆಗಣಿಸಿರುವ ರಾಜ್ಯ ಸರ್ಕಾರ ಬಜೆಟ್ ಪ್ರತಿಯನ್ನು ಸುಡುವ ಮೂಲಕ ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಿರಾಶದಾಯಕವಾಗಿದ್ದು,ಕೃಷಿ ಕೂಲಿಕಾರರು ಮತ್ತು ರೈತರನ್ನು ಕಡೆಗಣಿಸಿದೆ. ಕಷಿ ಕೂಲಿಕಾರರ ಕಲ್ಯಾಣ ಮಂಡಳಿ ರಚನೆಯ ಭರವಸೆ ಹುಸಿಯಾಗಿದ್ದು, ಉದ್ಯೋಗ ಖಾತರಿ ಯೋಜನೆಯಡಿ ಹಣ ಮೀಸಲಿಟ್ಟಿಲ್ಲ. ಕಷಿ ಕೂಲಿಕಾರರ ಪಿಂಚಣಿ 3 ಸಾವಿರ ರೂ. ಸೇರಿ ಇತರ ಸೌಲಭ್ಯ ದೊರಕಿಲ್ಲ. ಕಷಿ ಕೂಲಿಕಾರರ ಸರ್ಕಾರಿ ಪಡಾ ಸಾಗುವಳಿ ಮಾಡುತ್ತಿರುವ ಕಷಿ ಕೂಲಿಕಾರರ ಸಾಗುವಳಿ ಬಜೆಟ್ ನಲ್ಲಿ ಪ್ರಸ್ತಾಪವಿಲ್ಲ. ಬಜೆಟ್ ವಿರೋಧಿಸಿ ಸಂಘದಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ಪದಾಧಿಕಾರಿಗಳಾದ ಎಂ.ಬಸವರಾಜ, ಹುಸೇನಪ್ಪ, ರಮೇಶ್ ಬಡಿಗೇರ್, ಮಂಜುನಾಥ ಡಗ್ಗಿ, ಕೀರಮ್ಮ, ಹುಲಿಗೆಮ್ಮ, ಬಾಳಪ್ಪ ಹುಲಿಹೈದರ್ ಇತರರಿದ್ದರು.