ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ

Nagraj-chalgeri
ನಾಗರಾಜ್ ಚಳಗೇರಿ
Published on

ಗಂಗಾವತಿ: ಕ್ಷೇತ್ರದ ಪ್ರಗತಿಗೆ ವಿವಿಧ ಯೋಜನೆಗಳಿಂದ ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಗೆ ಗಮನಹರಿಸಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮಾಜಿ ಉಪಾಧ್ಯಕ್ಷ ನಾಗರಾಜ್ ಚಳಗೇರಿ ಹೇಳಿದರು.

ನಗರದ ಬನ್ನಿಗಿಡದ ಕ್ಯಾಂಪ್‌ನಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಗಾಲಿ ಜನಾರ್ದನ ರೆಡ್ಡಿ ಶಾಸಕ ಸ್ಥಾನ ಅನರ್ಹತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬುದು ವದಂತಿ. ರೆಡ್ಡಿ ಅವರ ಮುತುವರ್ಜಿಯಿಂದಲೇ ಅನುದಾನ ಬಿಡುಗಡೆಯಾಗಿದೆ.

ನಗರದ ರಸ್ತೆ, ವಿದ್ಯುತ್ ದೀಪ ಸೇರಿ ಮೂಲ ಸೌಕರ್ಯಕ್ಕಾಗಿ 7 ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ ಕೆಆರ್‌ಡಿಎಲ್ ನಿರ್ವಹಣೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅದರಂತೆ ಮೈನಾರಿಟಿ ಅನುದಾನದಡಿ ಅಲ್ಪಸಂಖ್ಯಾತರ ಕಾಲನಿಯಲ್ಲಿ 3 ಕೋಟಿ ರೂ.ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಪಿಎಂಎಸ್‌ಜಿವೈ ಯೋಜನೆಯಡಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ 8 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿ ಸಾಯಿಬಾಬಾ ದೇವಾಲಯದಿಂದ ಕಡೇಬಾಗಿಲುವರೆಗಿನ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ.ಮಂಜೂರಾಗಿದ್ದು, ಈಗಾಗಲೇ ಶೇ.50 ಕಾಮಗಾರಿ ಪೂರ್ಣಗೊಂಡಿದೆ. ನಗರದ ಪ್ರಮುಖ ರಸ್ತೆಯಲ್ಲಿರುವ ಹಳೆಯದಾದ ಬೀದಿ ದೀಪದ ಕಂಬಗಳನ್ನು ನವೀಕರಿಸಲಾಗುತ್ತಿದ್ದು, ಮಾದರಿ ದೀಪಗಳನ್ನು ಅಳವಡಿಸಲಾಗುವುದು.

ನಗರೋತ್ಥಾನ ಅನುದಾನದಡಿ ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿ ಶುರುವಾಗಲಿವೆ. ಗಾಲಿ ಜನಾರ್ದನ ರೆಡ್ಡಿ ಅವರಿಗೆ ವಿಧಿಸಿರುವ ತೀರ್ಪಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ದೊರೆಯುವ ವಿಶ್ವಾಸವಿದೆ ಎಂದರು. ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಯಮನೂರಿ ಚೌಡ್ಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net