

ಗಂಗಾವತಿ: ಇಲ್ಲಿನ ರಾಯಚೂರು ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿ ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಸುಣಗಾರ ಓಣಿಯ ಜೆ. ವೆಂಕಟೇಶ (34) ಎಂಬಾತನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ್ದು, ಹಳೇ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದೆ.
ಕೊಪ್ಪಳ-ರಾಯಚೂರು ಸಂಪರ್ಕ ರಸ್ತೆ ಲೀಲಾವತಿ ಆಸ್ಪತ್ರೆ ಬಳಿ ಮಂಗಳವಾರ ರಾತ್ರಿ 2.30ರ ವೇಳೆಗೆ ಘಟನೆ ನಡೆದಿದ್ದು, ತಲೆ, ಮುಖ ಸೇರಿ ದೇಹದ ಹಲವು ಭಾಗದಲ್ಲಿ ಮಚ್ಚಿನೇಟು ಬಿದ್ದಿವೆ. ಹತ್ಯೆ ಸುದ್ದಿಯಾಗುತ್ತಿದ್ದಂತೆ ಬೆಂಬಲಿಗರು ಉಪವಿಭಾಗ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಮತ್ತು ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ಪಡೆ ಆಗಮಿಸಿದ್ದು, ತನಿಖೆ ಮುಂದುವರಿದಿದೆ.
ಮಚ್ಚಿನೇಟು: ಜೆ.ವೆಂಕಟೇಶ ಮತ್ತು ಬೆಂಬಲಿಗರು ಕಂಪ್ಲಿ ರಸ್ತೆಯ ದೇವಿನಗರದ ಕುರಿ ಶೆಡ್‌ನಲ್ಲಿ ಊಟ ಮುಗಿಸಿಕೊಂಡು 2.30ರ ವೇಳೆಗೆ ಹೊರ ಬಂದಿದ್ದು, ಹಿಂದಿನಿಂದ ಟಾಟಾ ಇಂಡಿಕಾ ಕಾರಿಯಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಆಸ್ಪತ್ರೆ ಬಳಿ ವೆಂಕಟೇಶ ಇದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಬೆಂಬಗಲಿರು ರಕ್ಷಿಸಲೆತ್ನಿಸಿದ್ದು, ಕಾರಿನಿಂದ ವಾಪಸ್ ಬಂದ ದುಷ್ಕರ್ಮಿಗಳು ಮಚ್ಚು ಬೀಸಿದ್ದಾರೆ. ಘಟನೆಯಿಂದ ಬೆಂಬಲಿಗರು ಓಡಿ ಹೋಗಿದ್ದು, ಗಾಯಗೊಂಡಿದ್ದ ವೆಂಕಟೇಶ ಓಡಲಾಗದೇ ಮಚ್ಚಿನೇಟಿಗೆ ಬಲಿಯಾಗಿದ್ದಾರೆ. ಅಲ್ಲಿಂದ ಪರಾರಿಯಾಗಲೆತ್ನಿಸಿದ ಆರೋಪಿಗಳು ಇಂಡಿಕಾ ಕಾರನ್ನು ವಿಜಯನಗರ ಕಾಲನಿಯಲ್ಲಿ ಬಿಟ್ಟುಹೋಗಿದ್ದು, ಅದರಲ್ಲಿದ್ದ ಮಾರಕಾಸಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಳೇ ವೈಷಮ್ಯವೇ ಕಾರಣ: 2023ರಲ್ಲಿ ನಗರದ ವಿದ್ಯಾನಗರ ಹೆದ್ದಾರಿಯಲ್ಲಿ ಅಮರಭಗತ್‌ಸಿಂಗ್ ನಗರದ ಮಾರುತಿ ಎಂಬಾತನನ್ನು ರವಿ ಬೆಂಬಲಿಗರು ಕಲ್ಲು ಎತ್ತಿಹಾಕಿ ಗಾಯಗೊಳಿಸಿದ್ದು, ಕೋಮಾ ಸ್ಥಿತಿಗೆತಲುಪಿದ್ದ ಮಾರುತಿ 2025ರಲ್ಲಿ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಆರೋಪಿಗಳು ಜೈಲು ಸೇರಲು ವೆಂಕಟೇಶನೇ ಕಾರಣ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಅಂದಿನ ಪ್ರಕರಣದಲ್ಲಿ ಭಾಗಿಯಾಗಿದ್ದವರೇ ಇಂದಿನ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹತ್ಯೆಯಾದ ವೆಂಕಟೇಶ ತಂದೆ ಹಂಪಣ್ಣ ನಗರ ಠಾಣೆಗೆ ದೂರು ನೀಡಿದ್ದಾರೆ.
ಶರಣಾದ ಆರೋಪಿಗಳು: ಹತ್ಯೆ ಆರೋಪಿಗಳಾದ ನಗರದ ಬಸವಣ್ಣ ಕ್ಯಾಂಪ್ ನಿವಾಸಿ ಭೀಮ ಅಲಿಯಾಸ್ ಭರತ್ ಕರಿಯಪ್ಪ, ಅಮರಭಗತ್‌ಸಿಂಗ್ ನಗರದ ಸಲೀಂ ರಫಿಕ್, ಇಂದಿರಾನಗರದ ವಿಜಯ್ ಹನುಮಂತಪ್ಪ ಮತ್ತು 28ನೇ ವಾರ್ಡ್‌ನ ಧನರಾಜ್ ಲಕ್ಷ್ಮಣರಾವ್ ಎಂಬುವರು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಅಲ್ಲಿನ ಪೊಲೀಸರು ಗಂಗಾವತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುರು, ಶಿಷ್ಯರು...
ರವಿ ಮತ್ತು ವೆಂಕಟೇಶ ಒಂದು ಕಾಲದಲ್ಲಿ ಗುರು ಶಿಷ್ಯರಾಗಿದ್ದು, ಪ್ರಭಾವ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರ ನಡುವೆ ದ್ವೇಶ ಶುರುವಾಗಿತ್ತು. ಇಸ್ಪೀಟ್ ಜೂಜಾಟಕ್ಕೆ ಸಂಬಂಧಿಸಿದಂತೆ ಕೆಲ ವರ್ಷಗಳ ಹಿಂದೆ ಇಬ್ಬರೂ ಬೆಂಬಲಿಗರ ನಡುವೆ ಜಗಳವಾಗಿದ್ದು, ಹತ್ಯೆ ಹಂತದವರೆಗೂ ತಲುಪಿತ್ತು. ಕ್ಲಬ್ ಮಾಫಿಯಾ ಘಟನೆಗೆ ಕಾರಣ ಎನ್ನಲಾಗಿದೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿರುವುದು ವಿಶೇಷ. ಘಟನೆ ಆರೋಪಿ ರವಿ ವಿರುದ್ಧ ಹತ್ಯೆ, ಹತ್ಯೆಗೆ ಯತ್ನ, ದರೋಡೆ ಸೇರಿ ಈಗಾಗಲೇ 10ರಿಂದ 15 ಪ್ರಕರಣಗಳಿದ್ದು, ಎರಡು ವರ್ಷದ ಹಿಂದೆ ಗಡಿಪಾರಾಗಿದ್ದಾನೆ.
ಗಣ್ಯರ ಭೇಟಿ, ಕುಟುಂಬಕ್ಕೆ ಸಾಂತ್ವನ: ಹತ್ಯೆಯಾದ ಜೆ.ವೆಂಕಟೇಶ ನಿವಾಸಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮತ್ತು ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ ನೇತೃತ್ವದ ಬಿಜೆಪಿ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಗರ ಠಾಣೆಗೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರನ್ನು ಒತ್ತಾಯಿಸಿದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಹಳೇ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ ವೆಂಕಟೇಶ ಹತ್ಯೆಯಾಗುತ್ತಿರಲಿಲ್ಲ ಎಂದು ತಂದೆ ಹಂಪಣ್ಣ ಸೇರಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಜೆ.ವೆಂಕಟೇಶ ಕೊಲೆಯಾಗಿದ್ದು, ರವಿ ಮತ್ತು ಸಹಚರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು. ಡಾ.ರಾಮ್ ಎಲ್. ಅರಸಿದ್ದಿ ಎಸ್ಪಿ, ಕೊಪ್ಪಳ