

ಗಂಗಾವತಿ ಕಸಾಪ ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮತ್ತು ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಬಂಜಾರ ಕತೆ, ಕಾವ್ಯ ಮತ್ತು ನಾಟಕ ರಚನಾ ತರಬೇತಿ ಶಿಬಿರಕ್ಕೆ ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ ಶುಕ್ರವಾರ ಚಾಲನೆ ನೀಡಿದರು. ಅಕಾಡೆಮಿ ಸದಸ್ಯ ಹಾಗೂ ಕಾರ್ಯಾಗಾರದ ಸಂಚಾಲಕ ಕುಮಾರ ರಾಠೋಡ, ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಾ ರಾಠೋಡ, ಪ್ರಾಚಾರ್ಯ ಡಾ.ಎನ್.ರವಿ ಚವ್ಹಾಣ ಇತರರಿದ್ದರು.
ಗಂಗಾವತಿ: ಶ್ರೀಮಂತ ಸಂಸ್ಕೃತಿ ಹೊಂದಿದ ಬಂಜಾರ ಸಮಾಜ ಸರ್ಕಾರದ ಸೌಲಭ್ಯ ಪಡೆಯುವುದರ ಮೂಲಕ ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಬೇಕು ಎಂದು ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ ಹೇಳಿದರು.
ನಗರದ ಕಸಾಪ ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಂಜಾರ ಕತೆ, ಕಾವ್ಯ ಮತ್ತು ನಾಟಕ ರಚನಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರಮಜೀವಿಗಳಾದ ಬಂಜಾರ ಸಮುದಾಯ, ಮಾಹಿತಿ ಕೊರತೆಯಿಂದ ಅಭಿವೃದ್ಧಿಯಿಂದ ಹಿಂದುಳಿದಿದೆೆ. ಜಾಗೃತಿ ಕಾರ್ಯಾಗಾರದ ಮೂಲಕ ಸಮಾಜದ ಅಭಿವೃದ್ಧಿಗೆ ಅಕಾಡೆಮಿ ಸದಸ್ಯರು ಶ್ರಮಿಸಬೇಕಿದ್ದು, ಉಪಯುಕ್ತ ಕಾರ್ಯಾಗಾರ ಆಯೋಜಿಸಬೇಕಿದೆ ಎಂದರು.
ಎಚ್.ಆರ್. ಸರೋಜಮ್ಮ ಪಿಯು ಕಾಲೇಜಿನ ಪ್ರಾಚಾರ್ಯ ಹಾಗೂ ಸಂಶೋಧಕ ಡಾ.ಎನ್.ರವಿ ಚವ್ಹಾಣ ಮಾತನಾಡಿ, ಮೂರು ವರ್ಷಗಳ ಹಿಂದೆ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದ್ದು, ಸಮುದಾಯದ ಸಂಸ್ಕೃತಿ, ಭಾಷೆ ಮತ್ತು ಸಂಸ್ಕಾರ ಕುರಿತು ತಿಳಿವಳಿಕೆ ಮೂಡಿಸಲಾಗುತ್ತಿದೆ. 20 ವರ್ಷದಿಂದ 40ವರ್ಷದೊಳಗಿನ ಯುವಕ, ಯುವತಿಯರಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದು, 8 ದಿನ ನಡೆಯಲಿದೆ ಎಂದರು.
ಅಕಾಡೆಮಿ ಸದಸ್ಯ ಹಾಗೂ ಕಾರ್ಯಾಗಾರದ ಸಂಚಾಲಕ ಕುಮಾರ ರಾಠೋಡ, ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ, ಮಹಿಳಾ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ದೀಪಾ ರಾಠೋಡ, ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ತಾವರೆಪ್ಪ ಕಾರಭಾರಿ, ಕೃಷಿ ಅಧಿಕಾರಿ ಪ್ರಕಾಶ ರಾಠೋಡ, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪಾಂಡು ನಾಯ್ಕ, ಸಮಾಜದ ಮುಖಂಡರಾದ ವೆಂಕಟೇಶ ಜಾಧವ್, ನಾಥು ಕಾರಭಾರಿ, ಬಾಬುನಾಯ್ಕ, ಪಾರ್ವತಿ, ಸವಿತಾ ಇತರರಿದ್ದರು. ಸಂಪನ್ಮೂಲ ವ್ಯಕ್ತಿ ಛತ್ರಪ್ಪ ತಂಬೂರಿ ಕಾರ್ಯಕ್ರಮ ನಿರ್ವಹಿಸಿದರು.