

ಗಂಗಾವತಿ: ತಾಲೂಕಿನ ಮರಳಿ ರುದ್ರೇಶನಗರದ ಮರಕುಂಬಿ ಶಿಲಾಮಂಟಪದ ಪೀಠಾಧಿಪತಿ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮಿಗಳ 10ನೇ ಪುಣ್ಯ ಸ್ಮರಣೋತ್ಸವ ಮಂಗಳವಾರ ಜರುಗಿತು.
ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಹೂವಿನ ಅಲಂಕಾರ, ಭಜನೆ ಮತ್ತು ಪ್ರಸಾದ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ದಾವಣಗೇರೆಯ ವೀರೇಶ ಚನ್ನವೀರಸ್ವಾಮಿ ಪುರಾಣಿಕಮಠ ರಚಿಸಿರುವ ವಿಶ್ವಬಂಧು ಲಿಂ.ಮಲ್ಲಿಕಾರ್ಜುನ ಶ್ರೀಗಳ 108 ನಾಮಾವಳಿ ಕಿರುಹೊತ್ತಗೆ ಬಿಡುಗಡೆಗೊಳಿಸಲಾಯಿತು.
ಮಠದ ಧರ್ಮಾಧಿಕಾರಿ ಎಚ್.ಎಂ.ಗುರುಪಾದಸ್ವಾಮಿ ಮಾತನಾಡಿ, ಶಿಕ್ಷಣ ಮತ್ತು ದಾಸೋಹ ಪರಿಕಲ್ಪನೆಯಡಿಯಲ್ಲಿ ಶ್ರೀಗಳು ಶ್ರಮಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ, ಕಾಲೇಜುಗಳಿಗೆ ಆದ್ಯತೆ ನೀಡಿದ್ದರು ಎಂದರು.
ಉಪವಿಭಾಗ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಸಪ್ಪ ಉಮಲೂಟಿ, ಪಿಎಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ ಕುಲ್ಕರ್ಣಿ, ಮುಖಂಡರಾದ ಎಂ.ಹೊನ್ನಪ್ಪ, ಇಲಕಲ್ ಲಕ್ಷ್ಮಣ, ಸುರೇಶ ಕರಡಿ, ಷಣ್ಮುಖಪ್ಪ, ಪ್ರಭು, ಸುಭಾಷ, ಯಮನಪ್ಪ, ಗವಿಸಿದ್ದಪ್ಪ, ಶಂಕ್ರಪ್ಪ ಇತರರಿದ್ದರು.