

ಗಂಗಾವತಿ: ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯ ಹಾಳಾಗುತ್ತಿದ್ದು, ಅಡ್ಡದಾರಿ ಹಿಡಿಯುವ ಸಾಧ್ಯತೆಗಳಿವೆ ಎಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ವಿಶ್ವ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ನಿಮಿತ್ತ ಸೇಂಟ್ ಪಾಲ್ಸ್ ಾರ್ಮಸಿ ಕಾಲೇಜು ಮತ್ತು ತಾಲೂಕು ಔಷಧ ವ್ಯಾಪಾರಿಗಳ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಬದುಕು ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಿಂದ ದೂರ ಉಳಿಯುವ ಬಗ್ಗೆ ಸಂಕಲ್ಪ ಕೈಗೊಳ್ಳಬೇಕಿದೆ ಎಂದರು.
ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರು ಮಾತನಾಡಿ, ವೈದ್ಯರ ಸಲಹೆಯಿಲ್ಲದೇ ಔಷಧ ವ್ಯಾಪಾರಿಗಳು ಔಷಧ ಮಾರಾಟ ಮಾಡಬಾರದು. ಕೇಳಿದವರಿಗೆಲ್ಲಾ ಕೊಡುವುದು ಕಾನೂನಿನ ಪ್ರಕಾರ ಅಪರಾಧ ಎಂದರು.
ಸೇಂಟ್ ಪಾಲ್ಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಬೀದಿ ನಾಟಕ ಗಮನಸೆಳೆಯಿತು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಪಿಐ ಪ್ರಕಾಶ ಮಾಳೆ, ಪಿಎಸ್‌ಐ ಶಾರದಮ್ಮ, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಸರ್ವೇಶ ವಸದ್, ಖಜಾಂಚಿ ಕೃತಿಕ್ ವಸದ್, ಪ್ರಾಂಶುಪಾಲ ಮಂಜುನಾಥ ಹಿರೇಮಠ, ಉಪನ್ಯಾಸಕರು ಮತ್ತು ಔಷಧ ವ್ಯಾಪಾರಿಗಳಿದ್ದರು.