ಪಡಿತರ ಅಕ್ಕಿ ದಾಸ್ತಾನು ಪರಿಶೀಲನೆ

Untitled design 6
ಅನ್ನಭಾಗ್ಯ ಯೋಜನೆ ಅಕ್ಕಿ ಖಾಸಗಿ ರೈಸ್ ಮಿಲ್‌ಗೆ ಸಾಗಿಸಲೆತ್ನಿಸಿದ ಆಹಾರ ಇಲಾಖೆ ಮತ್ತು ಉಗ್ರಾಣ ನಿಗಮದ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ಗಂಗಾವತಿಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು. ಆರ್‌ಟಿಐ ಕಾರ್ಯಕರ್ತ ಎಸ್.ಎಚ್.ಮುಧೋಳ, ಪದಾಧಿಕಾರಿಗಳಾದ ವೆಂಕಟೇಶ ಮಾಂತಾ, ಶಿವಪ್ಪ ಮಾದಿಗ, ಸಲೀಂ ಭಾಗವಾನ್ ಇತರರಿದ್ದರು.
Published on

ಗಂಗಾವತಿ: ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್ ನಗರದ ಟಿಎಪಿಸಿಎಂಎಸ್ ಆವರಣದ ಪಡಿತರ ಅಕ್ಕಿ ದಾಸ್ತಾನು ಗೋದಾಮಿಗೆ ಗುರುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಪ್ರಕರಣ ನಡೆದು 72 ಗಂಟೆ ನಂತರ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಅನುಮಾನಕ್ಕೆ ಕಾರಣವಾಗಿದೆ. ಒಂದೇ ಗೋದಾಮಿನಲ್ಲಿನ ದಾಸ್ತಾನು ಲೆಕ್ಕಪತ್ರಗಳ ಮಾಹಿತಿ ಪಡೆದು ಹಿಂದುರಿಗಿದ್ದಾರೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಾದರೂ, ಸಮರ್ಪಕ ಮಾಹಿತಿ ನೀಡದೇ ವಾಪಸ್ಸಾಗಿದ್ದಾರೆ. ಆಹಾರ ಶಿರಸ್ತೇದಾರರಾದ ಸುಹಾಸ್, ಶೇಖರಪ್ಪ, ನಾಗತ್ನಮ್ಮ ಇದ್ದರು.

ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿದ್ದ ಅನ್ನಭಾಗ್ಯ ಅಕ್ಕಿಯನ್ನು ಖಾಸಗಿ ಬ್ರಾಂಡ್ ಚೀಲಗಳ ಮೂಲಕ ಹೊರಗೆ ಸಾಗಿಸಲಾಗುತ್ತಿದ್ದು, ಸಂಘಟನೆಗಳ ದೂರಿನ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಆ.26ರಂದು ದಾಳಿ ನಡೆಸಿದ್ದರು. ಖಾಸಗಿ ಬ್ರಾಂಡ್‌ಗಳ 50 ಕೆಜಿ ಸಾಮರ್ಥ್ಯದ ಚೀಲದಲ್ಲಿ ಪಡಿತರ ಅಕ್ಕಿ ಶೇಖರಿಸಿಟ್ಟಿದ್ದು ಬೆಳಕಿಗೆ ಬಂದಿದ್ದು, ಇನ್ನೂ ಕೆಲವನ್ನು ಲಾರಿಯಲ್ಲಿ ಲೋಡ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಾಣ ನಿಗಮದ ವ್ಯವಸ್ಥಾಪಕ ಸೇರಿ ನಾಲ್ವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಶಿಸ್ತು ಪ್ರಾಧಿಕಾರ ಸೋಮಶೇಖರ್‌ರನ್ನು ಅಮಾನತುಗೊಳಿಸಿತ್ತು. ಈ ಸಂಬಂಧ ಆ.27ರಂದು ವಿಜಯವಾಣಿಯಲ್ಲಿ ಸಮಗ್ರ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net