ಆನೆಗೊಂದಿಯಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು

Gangavathi Anegundi development work
ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಮತ್ತು ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾನುವಾರ ಉದ್ಘಾಟಿಸಿದರು. ತಹಸೀಲ್ದಾರ್ ಯು.ನಾಗರಾಜ್, ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಸಂಗಾಪುರ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಲೋಕೇಶ ಇತರರಿದ್ದರು.
Published on

ಗಂಗಾವತಿ: ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ತಾಲೂಕಿನ ಆನೆಗೊಂದಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಮತ್ತು ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಐತಿಹಾಸಿಕ ಹಿನ್ನೆಲೆಯ ಕಿಷ್ಕಿಂದಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಪ್ರವಾಸೋದ್ಯಮ ಬೆಳೆಯುವ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುವುದು. ಪ್ರದಕ್ಷಿಣೆ ಪಥ, ಪ್ರಸಾದ ನಿಲಯ, ವಾಲ್ಮೀಕಿ ಮಂಟಪ, ಸ್ನಾನಘಟ್ಟ ಸೇರಿ ಇತರೆ ಕಾಮಗಾರಿಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಆನೆಗೊಂದಿ ಭಾಗದ ಜನರಿಗೆ ವ್ಯಾಪಾರ ವಹಿವಾಟು ವೃದ್ಧಿಯೊಂದಿಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದರು.

51.01 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಆನೆಗೊಂದಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಜನರಿಗೆ ಅಹವಾಲು ಸ್ವೀಕರಿಸಿದರು. ಇಲಾಖೆಯಲ್ಲಿ ನನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ತಹಸೀಲ್ದಾರ್ ಯು.ನಾಗರಾಜ್, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಸಂಗಾಪುರ ಗ್ರಾಪಂ ಅಧ್ಯಕ್ಷೆ ಮಂಜುಮ್ಮ ಲೋಕೇಶ, ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಮುಖಂಡರಾದ ಟಿ.ಜಿ.ಬಾಬು, ರಾಜೇಶ್ವರಿ ಸುರೇಶ, ಮಂಜುನಾಥ ಕಲಾಲ್, ಲಕ್ಷ್ಮಣನಾಯ್ಕ, ಮನೋಹರ್ ಗೌಡ ಹೇರೂರು, ಯಮನೂರ್ ಚೌಡ್ಕಿ, ವೀರೇಶ್ ಬಲಕುಂದಿ, ನಾಗರಾಜ್ ಚಳಗೇರಿ ಇತರರಿದ್ದರು.

ಅಹವಾಲು ಸಲ್ಲಿಕೆ: ಆನೆಗೊಂದಿ ಭಾಗದಲ್ಲಿ ರೈತರ ಉಳಿವಿಗಾಗಿ ಅಗ್ರಿ ಟೂರಿಸಂ, ಹೋಂ ಮತ್ತು ಾರ್ಮ್ ಸ್ಟೇಗೆ ಪರವಾನಗಿ ನೀಡುವುದು, 100 ಹಾಸಿಗೆಗಳ ಆಸ್ಪತ್ರೆ ಮಂಜೂರು, ಅರಣ್ಯ ವ್ಯಾಪ್ತಿಯ ನಿವಾಸಿಗಳ ಮನೆಗಳಿಗೆ ಪಟ್ಟಾ ನೀಡುವುದು, ಪಿಯ ಕಾಲೇಜು, ರೈತ ಸಂಪರ್ಕ ಕೇಂದ್ರ ಆರಂಭಿಸುವಂತೆ ಸ್ಥಳೀಯರು ಮನವಿ ಮಾಡಿದರು.

ವೆಂಕಟಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ತಾಲೂಕಿನ ವೆಂಕಟಗಿರಿಯ ಶಾಸಕರ ಕಚೇರಿಯಲ್ಲಿ ವೆಂಕಟಗಿರಿ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕುಡಿವ ನೀರು, ರಸ್ತೆ ಅಭಿವೃದ್ಧಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸ್ಥಳೀಯರು ಅಹವಾಲು ಸಲ್ಲಿಸಿದರು. ಅಧಿಕಾರಿಗಳ ಸಮ್ಮುಖದಲ್ಲಿ ಜನರ ಕುಂದುಕೊರತೆ ಆಲಿಸಿದ್ದು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು. ನಂತರ 81.73 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್, ನರೇಗಾ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ, ಸಿಡಿಪಿಒ ಜಯಶ್ರೀ ದೇಸಾಯಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಮರೇಗೌಡ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್, ಶಿಕ್ಷಣ ಸಂಯೋಜಕ ಆನಂದ ನಾಗಮ್ಮನವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net