ಅನಧಿಕೃತ ರೆಸಾರ್ಟ್‌ಗಳ ತೆರವು

gvt-1
ಗಂಗಾವತಿ ತಾಲೂಕಿನ ಸಣಾಪುರದಲ್ಲಿನ ನಿರ್ಮಾಣ ಹಂತದಲ್ಲಿದ್ದ ರೆಸಾರ್ಟ್‌ನ್ನು ಜೆಸಿಬಿ ಮೂಲಕ ಬುಧವಾರ ರೆಸಾರ್ಟ್ ತೆರವುಗೊಳಿಸಲಾಯಿತು. ಮತ್ತು ಗಂಗಾವತಿ ತಾಲೂಕಿನ ರೆಸಾರ್ಟ್ ತೆರವು ಕಾರ್ಯಕ್ಕೆ ಸಣಾಪುರದಲ್ಲಿ ಭೂ ಮಾಲೀಕರು ಅಡ್ಡಿಪಡಿಸಿದ್ದು, ದಾಖಲೆ ಪರಿಶೀಲಿಸಲು ಅಧಿಕಾರಿಗಳಿಗೆ ಪಟ್ಟು ಹಿಡಿದಿರುವುದು.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯಲ್ಲಿನ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಬುಧವಾರ ಚಾಲನೆ ನೀಡಿದ್ದು, ರೆಸಾರ್ಟ್ ಮಾಲೀಕರ ವಿರೋಧದ ಮಧ್ಯೆಯೂ ನೆಲಸಮಗೊಳಿಸಲಾಯಿತು.

ಕೃಷಿ ಭೂಮಿಯಲ್ಲಿ ಪರವಾನಗಿಯಿಲ್ಲದೇ ನಿರ್ಮಿಸಿಕೊಂಡ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಹವಾಮಾ( ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ) ಸೂಚನೆ ನೀಡಿದ್ದು, ಕಂದಾಯ, ಜೆಸ್ಕಾಂ, ಆರೋಗ್ಯ, ಪೊಲೀಸ್ ಮತ್ತು ಗ್ರಾಪಂ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.

ಬೆಳಗಿನ ಜಾವವೇ ತೆರವುಗೊಳಿಸಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಸ್ಥಳೀಯ ಅಧಿಕಾರಿಗಳು ಸಜ್ಜಾದರೂ ಹವಾಮಾ ಅಧಿಕಾರಿಗಳು ಬರಲಿಲ್ಲ. ಮಧ್ಯಾಹ್ನದ ವೇಳೆ ಬಂದ ನಂತರ ಸಣಾಪುರದಿಂದ ತೆರವು ಕಾರ್ಯ ಶುರು ಮಾಡಿದ್ದು, ಮೊದಲ ದಿನ ಆರು ರೆಸಾರ್ಟ್‌ಗಳನ್ನು ತೆರವುಗೊಳಿಸಲಾಯಿತು.

ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಸ್ವಯಂಪ್ರೇರಣೆಯಿಂದ ತೆರವುಗೊಳಿಸಲು ಕೆಲವರಿಗೆ ಅವಕಾಶ ನೀಡಲಾಯಿತು. ತಡೆಯಾಜ್ಞೆ ಇರುವ ರೆಸಾರ್ಟ್‌ಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ, ಕೆಲ ಮಾಹಿತಿ ಸಂಗ್ರಹಿಸಿತು.

ಐತಿಹಾಸಿಕ ಹಿನ್ನೆಲೆಯ ಕ್ಷೇತ್ರದಲ್ಲಿ ಅನಧಿಕೃತ ರೆಸಾರ್ಟ್‌ಗಳು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದು, ಕ್ರಮಕ್ಕಾಗಿ ಹೊಸಪೇಟೆಯ ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಚಾಲನೆ ನೀಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ತಹಸೀಲ್ದಾರ್ ಯು.ನಾಗರಾಜ್, ಜೆಸ್ಕಾಂ ಎಇಇ ಮಂಜುನಾಥ, ಪಿಡಿಒಗಳಾದ ರವೀಂದ್ರ ಕುಲ್ಕರ್ಣಿ, ವತ್ಸಲಾ, ಆರ್‌ಐ ಬಷೀರುದ್ದೀನ್, ವಿ.ಎ. ಚನ್ನಬಸವ ಇತರರಿದ್ದರು.

ಅಚ್ಚರಿಗೊಂಡ ಅಧಿಕಾರಿಗಳು:

ಯಾವುದೇ ಪರವಾನಗಿ ಇಲ್ಲದೇ ಸಣಾಪುರದ ಬಳಿ ಸರ್ಕಾರಿ ಭೂಮಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದಿಂದಲೇ ನಿರ್ಮಿಸುತ್ತಿದ್ದ ರೆಸಾರ್ಟ್ ವೀಕ್ಷಿಸಿದ ಅಧಿಕಾರಿಗಳು ಅಚ್ಚರಿಗೊಂಡರು. ಭೂ ಮಾಲೀಕ ಬೇರೆಯೊಬ್ಬರಿಗೆ ಗುತ್ತಿಗೆ ನೀಡಿದ್ದು, ಸ್ವಯಂ ಪ್ರೇರಣೆ ತೆರವಿಗೆ ಒಂದು ಗಂಟೆ ಗಡವು ನೀಡಿದರು.

ಸ್ಪಂದಿಸದಿದ್ದರಿಂದ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ವಿರುಪಾಪುರ ಗಡ್ಡಿಯಲ್ಲಿ ನಿರ್ಮಿಸುತ್ತಿದ್ದ ಅನಧಿಕೃತ ಮನೆ ತೆರವಿಗೆ ಮಾಲೀಕರು ಅಡ್ಡಿಪಡಿಸಿದ್ದು, ಸ್ವಯಂ ಪ್ರೇರಣೆಯಿಂದ ತೆರವಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರಿಂದ ಮನೆಯ ಒಂದು ಗೋಡೆಯನ್ನು ನೆಪಮಾತ್ರಕ್ಕೆ ತೆರವುಗೊಸಲಾಯಿತು. ಸಣಾಪುರ, ಆನೆಗೊಂದಿ ಮತ್ತು ಹನುಮನಹಳ್ಳಿಯಲ್ಲಿ ನಿರ್ಮಾಣದ ಹಂತದ ರೆಸಾರ್ಟ್‌ಗಳನ್ನು ತೆರವುಗೊಳಿಸಲಾಯಿತು.

=====

ಹೈಕೋರ್ಟ್ ಸೂಚನೆ ಮೇರೆಗೆ ಕೃಷಿ ಭೂಮಿಯಲ್ಲಿನ ಹೊಸದಾದ ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗಿದ್ದು, ಸ್ವಯಂಪ್ರೇರಣೆಯಿಂದ ತೆರವಿಗೆ ಅವಕಾಶ ನೀಡಲಾಗಿತ್ತು. ಗ್ರಾಪಂ ಹಂತದಲ್ಲಿ ಅನಧಿಕೃತ ರೆಸಾರ್ಟ್‌ಗಳ ಮೇಲೆ ಕ್ರಮವಾದಾಗ ಮಾತ್ರ ಶಾಶ್ವತ ನಿಯಂತ್ರಣ ಸಾಧ್ಯವಿದ್ದು, ಕೃಷಿ ಭೂಮಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ.

> ವಿ.ರಮೇಶ, ಆಯುಕ್ತ, ಹವಾಮಾ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net