

ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಮತ್ತು ಗಾಯಗೊಂಡ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಕನ್ನಡ ಸೇನೆ ತಾಲೂಕು ಘಟಕದ ಸದಸ್ಯರು ನಗರದ ಅರಣ್ಯ ಇಲಾಖೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಅರಣ್ಯ ಸಹಾಯಕ ಶಕೀಲ್‌ರಿಗೆ ಮನವಿ ಸಲ್ಲಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್ ಮಾತನಾಡಿ, ತಾಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋಟದ ಬಳಿ ಯುವಕನನ್ನು ಚಿರತೆ ಕೊಂದು ಹಾಕಿದ್ದು, ದೇವಾಲಯಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಬಾಲಕನ ಮೇಲೆ ದಾಳಿ ನಡೆಸಿತ್ತು. ರಂಗಾಪುರ ಜಂಗ್ಲಿ ಕೃಷಿ ಕಾರ್ಮಿಕಳ ಮೇಲೆ ನರಭಕ್ಷಕ ಚಿರತೆ ದಾಳಿ ನಡೆಸಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಸೂಕ್ತ ಪರಿಹಾರ ನೀಡಿಲ್ಲ. ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ವನ್ಯ ಪ್ರಾಣಿಗಳ ಹಾವಳಿಯಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಸೂಕ್ತ ಪರಿಹಾರದ ಜತೆಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಶಿವಪ್ಪ ವಿನೋಬನನಗರ, ಆಂಜನೇಯ ವಡ್ಡರಹಟ್ಟಿ, ನಾಗರಾಜ ಈಳಿಗೇರ್, ಶಿವರಾಜ, ನಾಗರಾಜ್, ಖಾದರ್‌ವಲಿ, ಲಕ್ಷ್ಮಣನಾಯಕ, ಗಂಗಣ್ಣ, ಪರಶುರಾಂ ಇತರರಿದ್ದರು.