ಸಾಧಕ-ಬಾಧಕ ಕುರಿತು ಮಾಹಿತಿ

Anegundi Guarantee Scheme Progress Review
ಆನೆಗೊಂದಿ ಗ್ರಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅನುಷ್ಟಾನ ಸಮಿತಿಗೆ ಹೊಸದಾಗಿ ನೇಮಕಗೊಂಡ ಸಬ್ಜಾವಲಿಗೆ ಆದೇಶ ಪತ್ರವನ್ನು ತಾಪಂ ಇಒ ರಾಮರೆಡ್ಡಿ ಪಾಟೀಲ್ ಶುಕ್ರವಾರ ವಿತರಿಸಿದರು. ಅನುಷ್ಟಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವಿ.ಬಾಬು, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ ಸಭೆ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ ಗ್ರಾಪಂ ಕಡೆ ಪರಿಕಲ್ಪನೆಯಲ್ಲಿ ಪರಿಶೀಲನೆ ನಡೆದಿದ್ದು, ಪಂಚ ಯೋಜನೆಗಳ ಅನುಷ್ಟಾನ, ಸಾಧಕ, ಬಾಧಕ ಕುರಿತು ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ 56,045 ಲಾನುಭವಿಗಳಿಗೆ ಮಾಸಿಕ 2ಸಾವಿರ ರೂ.ಜಮೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ 33,202 ಲಾನುಭವಿಗಳಿದ್ದಾರೆ ಎಂದು ಸಿಡಿಪಿಒ ಜಯಶ್ರೀ ರಾಜಪುರೋಹಿತ್ ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ 2ಲಕ್ಷ ಲಾನುಭವಿಗಳಿದ್ದು, ಸರ್ಕಾರದ ಆದೇಶದಂತೆ 15 ಕೆಜಿ ಅಕ್ಕಿ ವಿತರಿಸಲಾಗಿದೆ ಎಂದು ಆಹಾರ ಶಿರಸ್ತೇದಾರ ಸುಹಾಸ್ ಮಾಹಿತಿ ನೀಡಿದರು. ವದ್ಧರು, ಅಂಗವಿಕಲರಿಗೆ ನ್ಯಾಯಬೆಲೆ ಅಂಗಡಿಗಳ ಬಳಿ ಅನುಕೂಲ ಕಲ್ಪಿಸಬೇಕು. ಕುಡಿವ ನೀರು ವ್ಯವಸ್ಥೆ, ಅಂಗಡಿಗಳನ್ನು ಸರಿಯಾದ ಸಮಯಕ್ಕೆ ತೆರೆದು ಜನರಿಗೆ ಅಕ್ಕಿ ವಿತರಿಸಬೇಕು. ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ವಿಜಿಲೆನ್ಸ್ ತಂಡ ಗಮನಹರಿಸಲು ಸಮಿತಿ ಸದಸ್ಯರು ಸಲಹೆ ನಿಡಿದರು. ಶಕ್ತಿ ಯೋಜನೆಯಿಂದ 2.89 ಕೋಟಿ ಆದಾಯವಿದ್ದು, ಗಂಗಾವತಿ-ಹುಲಿಗಿ ಮಾರ್ಗದಲ್ಲಿ ನಿತ್ಯ 38 ಟ್ರಿಪ್ ಸಂಚಾರವಿದೆ. ದಿನಕ್ಕೆ ಸರಾಸರಿ 1.70ಲಕ್ಷ ಆದಾಯವಿದೆ ಎಂದು ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ರಾಜಶೇಖರ್ ಸಿಂಧೂರು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ 60,801 ಜನ ನೋಂದಾಯಿಸಿದ್ದು, 60256 ಲಾನುಭವಿಗಳಿಗೆ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಜೆಸ್ಕಾಂ ಎಇಇ ಮಂಜುನಾಥ ಹೇಳಿದರು.

ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶ ಬಾಬು ಮಾತನಾಡಿ, ರಾಜ್ಯ ಸರ್ಕಾರದ ಪಂಚಯೋಜನೆಗಳು ಅರ್ಹರಿಗೆ ತಲುಪುತ್ತಿದ್ದು, ಸಮಸ್ಯೆಗಳು ಬಂದಲ್ಲಿ ಅಧಿಕಾರಿಗಳು ಪರಿಹಾರ ಕಲ್ಪಿಸಬೇಕಿದೆ ಎಂದರು.

ತಾಪಂ ಇಒ ರಾಮರೆಡ್ಡಿ ಪಾಟೀಲ್, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಪಿಡಿಒ ರವೀಂದ್ರ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net