ರಸ್ತೆ ದುರಸ್ತಿ ನೆಪದಲ್ಲಿ ಅನುದಾನ ದುರ್ಬಳಕೆ

Protest
ಗಂಗಾವತಿ ರಸ್ತೆಗಳ ಶಾಶ್ವತ ದುರಸ್ತಿಗೆ ಆಗ್ರಹಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಶ್ರೀ ಬಸವೇಶ್ವರ ಪ್ರತಿಮೆ ಮುಂದೆ ತೆಂಗಿನ ಕಾಯಿ ಒಡೆಯುವ ಮೂಲಕ ವಿನೂತನವಾಗಿ ಗುರುವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ್, ರಾಘುಕಡೇಬಾಗಿಲು, ದುರುಗೇಶ ಹೊಸಳ್ಳಿ ಇತರರಿದ್ದರು.
Published on

ಗಂಗಾವತಿ: ನಗರದ ರಸ್ತೆಗಳ ಶಾಶ್ವತ ದುರಸ್ತಿಗೆ ಆಗ್ರಹಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ಶ್ರೀ ಬಸವೇಶ್ವರ ಪ್ರತಿಮೆ ಮುಂದೆ 101 ತೆಂಗಿನ ಕಾಯಿ ಒಡೆಯುವ ಮೂಲಕ ವಿನೂತನವಾಗಿ ಗುರುವಾರ ಪ್ರತಿಭಟನೆ ನಡೆಸಿ ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್‌ಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ನಗರದ ಎಲ್ಲ ರಸ್ತೆಗಳು ಹದಗೆಟ್ಟಿದ್ದು, ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಜೀವ ಭಯದಲ್ಲಿ ಸಂಚರಿಸುವ ಸ್ಥಿತಿ ಬಂದಿದ್ದು, ಐತಿಹಾಸಿಕ ಅಂಜನಾದ್ರಿ ಮತ್ತು ಹುಲಿಗೆಮ್ಮ ದೇಗುಲ ಸಂಪರ್ಕಿಸುವ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುಂಡಿಮುಚ್ಚುವ ನೆಪದಲ್ಲಿ ಅಧಿಕಾರಿಗಳು ಅನುದಾನ ದುರ್ಬಳಕೆ ಮಾಡುತ್ತಿದ್ದು, ಶಾಶ್ವತ ದುರಸ್ತಿಯಾಗುತ್ತಿಲ್ಲ.

ರಸ್ತೆ ಒತ್ತುವರಿಯಿಂದ ವಾಹನಗಳ ಪಾರ್ಕಿಂಗ್ ಸಮಸ್ಯೆಯಾಗಿದ್ದು, ಸಂಚಾರ ಸಿಕ್ಕುಗೆ ಕಾರಣವಾಗಿದೆ. ಎಲ್ಲ ರಸ್ತೆಗಳ ಶಾಶ್ವತ ದುರಸ್ತಿ ಜತೆಗೆ ಒತ್ತುವರಿಯಾಗಿರುವ ಕಟ್ಟಡಗಳ ತೆರವು, ಮಾರ್ಗ ಸೂಚಿಸುವ ನಾಮಲಕ ಹಾಕುವುದು, ನನೆಗುದಿಗೆ ಬಿದ್ದಿರುವ ಸಿಟಿ ಮಾರುಕಟ್ಟೆ ಆರಂಭಕ್ಕೆ ಕ್ರಮ ಕೈಗೊಳ್ಳುವುದು, ಎಲ್ಲ ರಸ್ತೆಗಳಲ್ಲಿ ಡಿವೈಡರ್ ಹಾಕುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ್, ರಾಘು ಕಡೇಬಾಗಿಲು, ದುರುಗೇಶ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಕೃಷ್ಣ ಮೆಟ್ರಿ, ಬಸವರಾಜ ನಾಯಕ, ಪಂಪಾಪತಿ ಕುರಿ, ಚಾಂದ್‌ಬಾಷಾ, ಹಾಲಪ್ಪ, ನಾಗರಾಜ್ ಕಟ್ಟಿಮನಿ, ವಿರುಪಣ್ಣ, ಹರ್ಷ ಇತರರಿದ್ದರು.

ಮತ್ತೆ ಹಾಳಾದ ಮಾರ್ಗ: ಪಾರ್ಟ್ ಹೋಲ್ ಫಿಲ್ಲಿಂಗ್ (ಗುಂಡಿ ಮುಚ್ಚುವುದು)ನೆಪದಲ್ಲಿ ವರ್ಷದಲ್ಲಿ ಐದು ಬಾರಿ ಗುಂಡಿ ಮುಚ್ಚುವ ಅನುದಾನ ಬಳಸಿಕೊಂಡರೂ ಪುನಃ ಗುಂಡಿಗಳು ಕಾಣಿಸಿಕೊಂಡಿವೆ. ಅವೈಜ್ಞಾನಿಕ, ಅರೆಬರೆ ಕಾಮಗಾರಿಯಿಂದ ಅನುದಾನ ದುರ್ಬಳಕೆಯಾಗುತ್ತಿದ್ದು, ಗುಂಡಿ ಮುಚ್ಚುತ್ತಿಲ್ಲ. 15 ದಿನಗಳ ಹಿಂದೆ ಗುಂಡಿ ಮುಚ್ಚುವ ಕಾಮಗಾರಿಗಾಗಿ ನಗರಸಭೆ ನಿಧಿಯಿಂದ 15ಲಕ್ಷ ರೂ. ಮತ್ತು ಸಂಸದರ ನಿಧಿಯಿಂದ 15ಲಕ್ಷ ರೂ. ೋಷಣೆಯಾಗಿದ್ದರೂ ತಾತ್ಕಾಲಿಕ ದುರಸ್ತಿಯಾಗಿಲ್ಲ. ಪ್ರತಿಸಲವೂ ಒಂದೊಂದು ರೀತಿಯ ಕಾಮಗಾರಿ ನೆಪದಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ವೆಟ್ ಮಿಕ್ಸ್, ಮರಮ್, ಪೇವರ್ ಮತ್ತು ಬಿಟಿ (ಡಾಂಬರ್) ಹಾಕುವ ಬಗ್ಗೆ ಹೇಳುವ ನಗರಸಭೆ ಅಧಿಕಾರಿಗಳಲ್ಲಿ ಸ್ಪಷ್ಟತೆಯಿಲ್ಲ. ಮತ್ತೆ ರಸ್ತೆ ಹಾಳಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net