ಚಂದ್ರಗೌಡಗೆ ಗಂಗಾವತಿಯ ಎಪಿಎಂಸಿ ಪಟ್ಟ

01062020 Gangavati APMC President Elected
Published on

ಇಬ್ಬರೂ ಅವಿರೋಧ ಆಯ್ಕೆ | ಉಪಾಧ್ಯಕ್ಷೆಯಾದ ನಿರ್ಮಲಾ

ಗಂಗಾವತಿ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂರನೇ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯರಡೋಣಾದ ಚಂದ್ರಗೌಡ ಬಸವರಾಜಪ್ಪ ಮತ್ತು ಉಪಾಧ್ಯಕ್ಷೆಯಾಗಿ ರಾಂಪುರದ ನಿರ್ಮಲಾ ಕಾಂತಿಬಸವ ಬಾಗೋಡಿ ಅವಿರೋಧ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಚಂದ್ರಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಲಾ ಕಾಂತಿ ಬಸವ ಬಾಗೋಡಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಎಲ್.ಡಿ.ಚಂದ್ರಕಾಂತ ೋಷಿಸಿದರು.

ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ 15 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತರು ಒಬ್ಬರಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ 10 ತಿಂಗಳಿಗೊಬ್ಬರಂತೆ ಹೈಕಮಾಂಡ್ ಒಮ್ಮತದ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಗೆ ಸದಸ್ಯರು ಸಹಕರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಎಪಿಎಂಸಿ ವ್ಯಾಪ್ತಿಯ ರೈತರು ಮತ್ತು ವರ್ತಕರ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನಿಸಲಾಗುತ್ತಿದ್ದು, ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿ ಹೆಚ್ಚಿನ ಅನುದಾನ ತರಲಾಗುವುದು. ಎಪಿಎಂಸಿ ಖಾಸಗೀಕರಣದ ಬಗ್ಗೆ ವದಂತಿಗಳಿದ್ದು, ಗೆಜೆಟ್ ನೋಟಿಫಿಕೇಶನ್ ನೋಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಚಂದ್ರಗೌಡ ಬಸವರಾಜಪ್ಪ, ಎಪಿಎಂಸಿ ನೂತನ ಅಧ್ಯಕ್ಷ

ಒಮ್ಮತದ ಅಭ್ಯರ್ಥಿಯ ಆಯ್ಕೆ

ಗಂಗಾವತಿ: ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿದ್ದರಿಂದ ಅಧಿಕಾರ ಬಿಜೆಪಿ ಪಾಲಾಗಿದ್ದು, ಒಮ್ಮತದ ಅಭ್ಯರ್ಥಿಯನ್ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ ಅವರು, ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ಅಧಿಕಾರಕ್ಕಾಗಿ ಗೊಂದಲವಿಲ್ಲ. ಪಕ್ಷದ ಮುಖಂಡರು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ. ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ಕನಕಗಿರಿ ವಿಧಾನಸಭೆ ಕ್ಷೇತ್ರಕ್ಕೆ ಬಿಟ್ಟುಕೊಡಲಾಗಿದೆ.

ಹೊಸ ಅಧ್ಯಕ್ಷ, ಉಪಾಧ್ಯಕ್ಷರು 20 ತಿಂಗಳ ಅವಧಿಯನ್ನು ಪೂರ್ಣಗೊಳಿಸಲಿದ್ದು, ಯಾವುದೇ ಒಪ್ಪಂದವಾಗಿಲ್ಲ. ಶಾಸಕ ಬಸವರಾಜ ದಢೇಸುಗೂರು, ಮಾಜಿ ಶಾಸಕ ಜಿ.ವೀರಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರಗೌಡ, ಉಪಾಧ್ಯಕ್ಷೆ ನಿರ್ಮಲಾ ಕಾಂತಿಬಸವ ಬಾಗೋಡಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡರಾದ ಸಾಲೋಣಿ ವೀರೇಶ, ಚನ್ನಪ್ಪಮಳಗಿ, ಚಂದ್ರಶೇಖರ್ ಮುಸಾಲಿ,ಎಚ್.ಎಂ.ಸಿದ್ರಾಮಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net