

ಗಂಗಾವತಿ: ಕೃಷಿ ಪರಿಕರಗಳ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್ ಕಡ್ಡಾಯವಾಗಿದ್ದು, ಪರವಾನಗೆ ಪಡೆಯಲು ಪ್ರಮಾಣ ಪತ್ರದ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ್ ಹೇಳಿದರು.
ನಗರದ ಕೃಷಿ ಸಂಶೋಧನಾ ಕೇಂದ್ರದ ತರಬೇತಿ ಸಭಾಂಗಣದಲ್ಲಿ ಕೃಷಿ ವಿವಿ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆಯಿಂದ ಕೃಷಿ ಪರಿಕರಗಳ ಮಾರಾಟಗಾರರಿಗೆ ಗುರುವಾರ ಹಮ್ಮಿಕೊಂಡಿದ್ದ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಕೋರ್ಸ್‌ಗೆ ಸೇರಿಕೊಳ್ಳುವ ಮಾರಾಟಗಾರರು 48 ವಾರದ ತರಗತಿಗೆ ಕಡ್ಡಾಯ ಹಾಜರಾಗಬೇಕಿದ್ದು, ಕಷಿ ಆಧಾರಿತ ವಿಷಯಗಳೊಂದಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುತ್ತಿದೆ. ಕ್ಷೇತ್ರ ಭೇಟಿ ಮೂಲಕ ಜ್ಞಾನ ಪಡೆದು ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸಬೇಕಿದೆ ಎಂದರು.
ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ. ಹನುಮಂತಪ್ಪ ಮಾತನಾಡಿ, ಕಷಿ ಪರಿಕರಗಳ ಮಾರಾಟಗಾರರು ಅರೆ ವಿಸ್ತರಣಾ ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸಬೇಕಿದ್ದು, ರೈತರೊಂದಿಗೆ ನೇರ ಸಂಪರ್ಕದಲ್ಲಿರಬೇಕು. ಡಿಪ್ಲೊಮಾ ಕೋರ್ಸ್‌ನಲ್ಲಿ ಪಡೆದ ಜ್ಞಾನವನ್ನು ರೈತರೊಂದಿಗೆ ಹಂಚಿಕೊಳ್ಳುವಂತೆ ಸಲಹೆ ನೀಡಿದರು.
ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಪ್ಪ ಚವಡಿ, ವಿಸ್ತರಣಾ ನಿರ್ದೇಶಕರಾದ ಡಾ.ಎ. ಅಮರೇಗೌಡ, ಡಾ.ಎಂ.ವಿ ಮಂಜುನಾಥ, ಕೃಷಿ ಇಲಾಖೆ ಅಪರ ಕೃಷಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ರಾಜ್ಯ ನೋಡಲ್ ಅಧಿಕಾರಿ ಡಾ.ಎಸ್.ಎನ್. ಜಾಧವ್, ಸರ್ಕಾರಿ ಕೃಷಿ ಕಾಲೇಜು ವಿಶೇಷಾಧಿಕಾರಿ ಡಾ.ಎಸ್.ಟಿ. ಯಂಜೇರಪ್ಪ, ಕೃಷಿ ತಂತ್ರಜ್ಞಾನ ಸಂಸ್ಥೆ ಪ್ರತಿನಿಧಿ ವೀರಣ್ಣ ಕಮತರ್, ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ, ಉಪಾಧ್ಯಕ್ಷ ಸೂರ್ಯಕಾಂತ ಸುಂಕನೂರ, ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್, ತಜ್ಞರಾದ ಡಾ.ಕವಿಕಾ ಉಳ್ಳಿಕಾಶಿ, ಡಾ.ಆರ್. ಜ್ಯೋತಿ, ಡಾ.ಜೆ.ರಾಧಾ, ಆರ್.ಎಂ.ರೇವತಿ, ಡಾ.ಮಲ್ಲೇಶ, ಡಾ.ಜಿ.ನಾರಪ್ಪ, ಡಾ. ಕೀರಪ್ಪ, ಎನ್.ಶ್ರುತಿ ಇತರರಿದ್ದರು.