

ಗಂಗಾವತಿ: ಪಾಕ್ ಬೆಂಬಲಿತ ಉಗ್ರರ ನಿರ್ಣಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿಲುವು ತಾಳಿದ್ದು, ವಿರೋಧಿಗಳಿಗೆ ಎಚ್ಚರಿಕೆ ಗಂಟೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿನ ನರಮೇಧ ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಭಾರತ ಶಾಂತಿಪ್ರಿಯ ದೇಶವಾಗಿದ್ದು, ಪ್ರತಿಯೊಂದು ಧರ್ಮಕ್ಕೂ ಪ್ರಾಧಾನ್ಯ ನೀಡಿದೆ. ಆದರೆ ಪಾಕ್ ಬೆಂಬಲಿತ ಉಗ್ರರು, ಹಿಂದು ಧರ್ಮವನ್ನೇ ಮುಖ್ಯವಾಗಿಟ್ಟುಕೊಂಡು ನರಮೇಧ ನಡೆಸಿದ್ದು ಖಂಡನೀಯವಾಗಿದ್ದು, ಕ್ಷಮೆಗೆ ಅರ್ಹರಲ್ಲ ಎಂದರು.
ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿ, ಧರ್ಮ ಕೇಳಿ ಹತ್ಯೆ ನಡೆದಿದ್ದು ಅಮಾನವೀಯ. ಘಟನೆ ನಡೆದು 24 ಗಂಟೆಯಲ್ಲಿ ಪಾಕಿಸ್ತಾನ ವಿರುದ್ಧ ಕಠಿಣ ನಿಲುವು ತಾಳಿದ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಸ್ವಾಗತಾರ್ಹ ಎಂದರು.
ಇದಕ್ಕೂ ಮುನ್ನ ನಗರದ ದುರ್ಗಾದೇವಿ ದೇವಾಲಯದಿಂದ ಗಾಂಧಿ ವೃತ್ತದವರೆಗೆ ದೀಪ ಪ್ರಜ್ವಂಲನದೊಂದಿಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ನಂತರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ್, ವಾಸುನವಲಿ, ನೀಲಕಂಠಪ್ಪ ಕಟ್ಟಿಮನಿ, ನವೀನ್ ಮಾಲಿ ಪಾಟೀಲ್, ಮೌಲಸಾಬ್, ಪರಶುರಾಮ್ ಮಡ್ಡೇರ್, ಮಾಜಿ ಸದಸ್ಯರಾದ ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಎಸ್.ರಾಘವೇಂದ್ರ ಶ್ರೇಷ್ಟಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಕಾಶೀನಾಥ ಚಿತ್ರಗಾರ, ಚನ್ನಪ್ಪ ಮಳಗಿ, ರೇಖಾ ರಾಯಭಾಗಿ ಇತರರಿದ್ದರು.