

ಗಂಗಾವತಿ: ನಗರದ ಬಸ್ ನಿಲ್ದಾಣ ಬಳಿ ರಸ್ತೆಯ ಗುಂಡಿಗಿಳಿದು ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ಗುರುವಾರ ಗೂಡಂಗಡಿಗಳ ಮೇಲೆ ಹರಿದಿದ್ದರಿಂದ ಬೀದಿಬದಿ ಮಹಿಳಾ ವ್ಯಾಪಾರಿ ಗಾಯಗೊಂಡಿದ್ದಾರೆ.
ರಸ್ತೆಯಲ್ಲಿ ದೊಡ್ಡ ಗುಂಡಿಗಳಿದ್ದು, ಗಂಗಾವತಿಯಿಂದ ಆನೆಗೊಂದಿ ಕಡೆ ತೆರಳುತ್ತಿದ್ದ ಟ್ರ್ಯಾಕ್ಟರ್ ಗುಂಡಿಗಿಳಿದು ನಿಯಂತ್ರಣ ತಪ್ಪಿದೆ. ಗಾಬರಿಗೊಂಡ ಚಾಲಕ ಟ್ರ್ಯಾಕ್ಟರ್ ಬಿಟ್ಟು ಓಡಿಹೋಗಿದ್ದರಿಂದ ಬಸ್ ನಿಲ್ದಾಣದ ಬಿದಿಬದಿ ವ್ಯಾಪಾರಗಳ ಮೇಲೆ ನುಗ್ಗಿದೆ. ತಳ್ಳುಗಾಡಿ, ಹಣ್ಣು ಸೇರಿ ಇತರ ವಸ್ತುಗಳು ಜಖಂಗೊಂಡಿವೆ.
ಜನಜಂಗುಳಿ ಕಡಿಮೆಯಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಟ್ರಾಫಿಕ್ ಪೊಲೀಸರು ಆಗಮಿಸಿ, ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು, ವಾಹನ ಸವಾರರು ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಬ್ಯಾಲೆನ್ಸ್ ತಪ್ಪುತ್ತಿದ್ದಾರೆ. ಇದರಿಂದ ಅನಾಹುತಗಳು ಹೆಚ್ಚಾಗುತ್ತಿದ್ದು, ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.