

ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯ ಅನಧಿಕೃತ ರೆಸಾರ್ಟ್‌ಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲೂಕಾಡಳಿತದಿಂದ ಮಂಗಳವಾರ ತೆರವುಗೊಳಿಸಲಾಯಿತು.
ನಿರ್ಮಾಣವಾಗಿರುವ ಮತ್ತು ನಿರ್ಮಾಣ ಹಂತದಲ್ಲಿರುವ ರೆಸಾರ್ಟ್‌ಗಳ ತೆರವಿಗೆ ಎರಡು ವರ್ಷದ ಹಿಂದೆ ನಿರ್ಧರಿಸಲಾಗಿದ್ದರೂ ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯ 8 ರೆಸಾರ್ಟ್ ಮಾಲೀಕರು ಧಾರವಾಡ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ವಿಚಾರಣೆ ಹಂತದಲ್ಲಿ ಅನಧಿಕೃತ ಎಂದು ಕೋರ್ಟ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತೆರವಿಗೆ ಧಾರವಾಡ ಹೈಕೋರ್ಟ್ ಅ.16ರಂದು ತೀರ್ಪು ನೀಡಿತ್ತು.
ಈ ಹಿನ್ನೆಲೆಯಲ್ಲಿ ತಾಲೂಕಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ತಂಡ ಆನೆಗೊಂದಿ, ಸಣಾಪುರ, ರಂಗಾಪುರ, ಹನುಮನಹಳ್ಳಿಯಲ್ಲಿದ್ದ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆಸಿತು. ಕೆಲವರು ವಾಸಕ್ಕಾಗಿ ಪರವಾನಗಿ ಪಡೆದು, ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಆರಂಭದಲ್ಲಿ ರೆಸಾರ್ಟ್ ಮಾಲೀಕರು ಅಡ್ಡಿಪಡಿಸಲೆತ್ನಿಸಿದರೂ, ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು. ಇನ್ನೂ ಕೆಲವರು ತೆರವು ಭೀತಿಯಲ್ಲಿ ಸ್ವಯಂ ಪ್ರೇರಣೆಯಿಂದ ರೆಸಾರ್ಟ್‌ನಲ್ಲಿದ್ದ ವಸ್ತುಗಳನ್ನು ಹೊರಗಿಟ್ಟುಕೊಂಡರು.
ಕಂದಾಯ, ಜೆಸ್ಕಾಂ, ಪೊಲೀಸ್ ಗ್ರಾಪಂ ಸಿಬ್ಬಂದಿ ನೆರವಿನೊಂದಿಗೆ ಕಾರ್ಯಾಚರಣೆ ನಡೆದಿದ್ದು, ಸ್ವಯಂ ತೆರವಿಗೆ ರೆಸಾರ್ಟ್ ಮಾಲೀಕರು ಅವಕಾಶ ಕೇಳಿದರೂ ಅಧಿಕಾರಿಗಳು ಒಪ್ಪಲಿಲ್ಲ.
ಹಂಪಿ ಪ್ರಾಧಿಕಾರ ಆಯುಕ್ತ ರಮೇಶ ವಟ್ಗಲ್ ಮಾತನಾಡಿ, ಆನೆಗೊಂದಿ, ಸಣಾಪುರ ಗ್ರಾಪಂ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಪ್ರಾಧಿಕಾರದ ನಿಯಮ ಉಲ್ಲಂಸಿ ರೆಸಾರ್ಟ ನಿರ್ಮಿಸಿದ್ದು, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿದ್ದವು. ಪರಿಸರ ಮತ್ತು ಐತಿಹಾಸಿಕ ಸ್ಮಾರಕಗಳಿಗೆ ತೊಂದರೆಯಾಗುವ ರೀತಿಯಲ್ಲಿ ನಿರ್ಮಾಣವಾಗಿದ್ದವು. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಇನ್ನೂ16 ರೆಸಾರ್ಟ್‌ಗಳ ಅರ್ಜಿ ವಿಚಾರಣೆ ಬಾಕಿಯಿದ್ದು, ನಂತರದ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ತಹಸೀಲ್ದಾರ್ ಯು.ನಾಗರಾಜ್, ಗ್ರಾಮೀಣ ಪಿಐ ರಂಗಪ್ಪ ದೊಡ್ಮನಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಹಂಪಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನಿಯಮ ಉಲ್ಲಂಸಿ ಕಟ್ಟಡ, ರೆಸಾರ್ಟ್, ಗುಡಿಸಲು ಹಾಕಿಕೊಂಡಿದ್ದು, ತೆರವಿಗೆ ಹೈಕೋರ್ಟ್ ಸೂಚನೆ ನೀಡಿದ್ದರಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ರಮೇಶ ವಟ್ಗಲ್
ಆಯುಕ್ತ, ಹಂಪಿ ಅಭಿವೃದ್ಧಿ ಪ್ರಾಧಿಕಾರ